

ರಬಕವಿ/ಬನಹಟ್ಟಿ: ರಬಕವಿ ನಗರದ ಶಂಕರಲಿಂಗ ದೇವಸ್ಥಾನ ಟ್ರಸ್ಟ್‌ನಿಂದ ಮಲ್ಲಿಕಾರ್ಜುನ ದೇವರ ಜಾತ್ರೆ ಶ್ರಾವಣ ಮಾಸದ 3ನೇ ಸೋಮವಾರ ಸೆ.4 ರಂದು ಜರುಗಲಿದೆ.
ಬೆಳಗ್ಗೆ ಮಲ್ಲಿಕಾರ್ಜುನ ದೇವರು- ಭ್ರಮರಾಂಭಾ ದೇವಿ ಪೂಜೆ, ಸಂಜೆ 4 ಗಂಟೆಗೆ ಕರಡಿ ಮಜಲಿನೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ. ಶುದ್ಧ ಶ್ರಾವಣ ಪವಿತ್ರ ಸೋಮವಾರ ಮುಸ್ಸಂಜೆ 6 ರಿಂದ 8 ಗಂಟೆವರೆಗೆ ಅದ್ದೂರಿ ರಥೋತ್ಸವ ಜರುಗುವುದು.
ಮರುದಿನ ಸೆ.5 ರಂದು ಮಧ್ಯಾಹ್ನ 3ಕ್ಕೆ ಹೆಸರಾಂತ ಕುಸ್ತಿ ಪಟುಗಳಿಂದ ಜಂಗೀ ನಿಕಾಲಿ ಕಾಟಾ ಕುಸ್ತಿ, ಸೆ.6 ರಂದು ಸಂಜೆ 6ಕ್ಕೆ ಕಲಶ ಇಳಿಸುವ ಮತ್ತು ಕರಡಿ ಮಜಲು ಜರುಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ ತಿಳಿಸಿದ್ದಾರೆ.
ಪಲ್ಲಕ್ಕಿಗಳ ಜಾತ್ರೆ: ಜಾತ್ರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ಹಾಗೂ ಮಹಾರಾಷ್ಟ್ರದ ಗಡಿ ಭಾಗ ಸೇರಿದಂತೆ ಅನೇಕ ಗ್ರಾಮಗಳಿಂದ 501ಕ್ಕೂ ಹೆಚ್ಚು ಪಲ್ಲಕ್ಕಿಗಳು ಬರುತ್ತವೆ. ಜಾತ್ರೆ ದಿನ ಬೆಳಗ್ಗೆ ಪಕ್ಕದ ಕೃಷ್ಣಾ ನದಿಗೆ ತೆರಳಿ ಪುಣ್ಯ ಸ್ನಾನ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗುತ್ತದೆ.