ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಮಲ್ಲಿಕಾರ್ಜುನ ಬಟಗಿ ಆಗ್ರಹ

MALLIAKARJUN BATAGI
ಮಲ್ಲಿಕಾರ್ಜುನ ಬಟಗಿ, ರಾಜ್ಯಾಧ್ಯಕ್ಷರು, ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘ
Published on

ವಿಜಯಪುರ: ಪರಿಶಿಷ್ಟ ಪಂಗಡಕ್ಕೆ ಸೇರದೇ ಇದ್ದರೂ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಕುರಿತು ಸದನದಲ್ಲಿ ಧ್ವನಿ ಎತ್ತಬೇಕಲ್ಲದೇ ಕೂಡಲೇ ಅಂಥ ಪ್ರಮಾಣ ಪತ್ರಗಳ ವಿತರಣೆಗೆ ಕಡಿವಾಣ ಹಾಕದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೆಜೆಟ್ ಅಧಿಸೂಚನೆಯ ಪ್ರಕಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಪಟ್ಟಿಯ ಕ್ರಮ ಸಂಖ್ಯೆ 38 ರಲ್ಲಿ ಬರುವ ನಾಯಕ, ವಾಲ್ಮೀಕಿ ಜನಾಂಗದ ಪರ್ಯಾಯ ಪದವಾದ ತಳವಾರ ಮತ್ತು ಪರಿವಾರ ಜನಾಂಗದವರಿಗೆ ಮಾತ್ರ ಎಸ್‌ಟಿ ಪ್ರಮಾಣ ಪತ್ರ ನೀಡುವುದನ್ನು ಬಿಟ್ಟು ಪ್ರವರ್ಗ-1 ರ ಹಿಂದುಳಿದ ಜಾತಿಯಲ್ಲಿ ಬರುವ ಅಂಬಿಗ, ಕಬ್ಬಲಿಗ, ಕೋಳಿ, ತಳವಾರ, ಗಂಗಾಮತ, ಡೋರ, ಟೋಕರೆಕೋಳಿ, ಗೊಂಡ ಹೀಗೆ ಮುಂತಾದ ಜಾತಿಯವರಿಗೂ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಹೀಗಾಗಿ ಕೂಡಲೇ ಕಡಿವಾಣ ಹಾಕಬೇಕಲ್ಲದೇ ಅಂಥ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಭಾರತ ಸರ್ಕಾರದ ಅಧಿಸೂಚನೆ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡದ ಕ್ರಮಸಂಖ್ಯೆ 38 ರಲ್ಲಿ ಬರುವ ನಾಯ್ಕಡ್, ನಾಯಕ, ಚೋಳ ನಾಯಕ, ಕಪಾಡಿಯ ನಾಯಕ, ಮೋಟಾ ನಾಯಕ, ನಾನಾ ನಾಯಕ, ನಾಯಕ, ಬೇಡ, ಬೇಡರ, ಮತ್ತು ವಾಲ್ಮೀಕಿ ಜಾತಿಗಳ ಜೊತೆ ಅದೇ ಜಾತಿಯ ಪರ್ಯಾಯ ಪದವಾದ ಪರಿವಾರ ಮತ್ತು ತಳವಾರ ಪರಿಶಿಷ್ಟ ಪಂಗಡದ ಸೌಲಭ್ಯಗಳನ್ನು ವಿಸ್ತರಿಸಬಹುದಾಗಿದೆ ಎಂದು ಕುಲಶಾಸ್ತ್ರೀಯ ಅಧ್ಯಯನ ಮುಖಾಂತರ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಅದರಂತೆ ರಾಜ್ಯ ಸರ್ಕಾರವು ಕೂಡ 2020 ಮೇ 25ರಂದು ಅಧಿಸೂಚನೆ ಹೊರಡಿಸಿದ್ದು, ನಾಯಕ ಜನಾಂಗದ ತಳವಾರ ಮತ್ತು ಪರಿವಾರ ಜಾತಿಯವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಬೇಕೆಂದು ಆದೇಶಿಸಲಾಗಿದೆ. ಆದರೂ, ಇತರರಿಗೂ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಈ ಬಗ್ಗೆ ಸದನದಲ್ಲಿ ಚರ್ಚಿಸಿ ಸಮಸ್ಯೆಗೆ ಅಂತ್ಯ ಹಾಡಬೇಕೆಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net