ಸಿಎಂ ಯಾರಾಗಬೇಕು ಎಂಬುದು ನಿರ್ಧಾರ ಆಗೋದು ಮೈಸೂರು, ಬೆಂಗಳೂರಿನಲ್ಲಿ ಅಲ್ಲ: ಮಲ್ಲಿಕಾರ್ಜುನ ಖರ್ಗೆ

Mallikharun Kharge
Published on

ಮೈಸೂರು: ಚುನಾವಣೆಗೂ ಮುನ್ನವೇ ನಾನು ಸಿಎಂ ಎಂದು ಹೇಳುವುದು ಸರಿಯಲ್ಲ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮೈಸೂರು, ಬೆಂಗಳೂರು ಅಥವಾ ಗುಲ್ಬರ್ಗದಲ್ಲಿ ತೀರ್ಮಾನವಾಗುವುದಿಲ್ಲ. ಪಕ್ಷದ ಹೈ ಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ. ಅಂದಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಹೈ ಕಮಾಂಡ್ ಯಾರಿಗೆ ನಾಯಕತ್ವ ನೀಡಬೇಕು ಎಂಬುದನ್ನು ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತದೆ. ಈ ಬಾರಿ ಅಂತಲ್ಲ, ಎಲ್ಲ ಕಾಲಘಟ್ಟದಲ್ಲೂ ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ನಮ್ಮದು ಯಾವಗಲೂ ಸಾಮೂಹಿಕ ನಾಯಕತ್ವ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಅದೇ ನಮ್ಮ ಉದ್ದೇಶ ಎಂದರು.

ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ನೀವು (ಮಾಧ್ಯಮ) ಅವಕಾಶ ಕೊಟ್ಟರೆ ಬರುತ್ತೇನೆ. ಎಲ್ಲ ಸೇರಿ ಅವಕಾಶ ಕೊಟ್ಟರೆ ನೋಡೋಣ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳುವ ಉತ್ಸಾಹ ತೋರಿದರು.

ಸೋನಿಯಾ ಗಾಂಧಿಯನ್ನು ಇಡಿ ವಿಚಾರಣೆ ಮಾಡುತ್ತಿರುವುದು ಸರಿಯಲ್ಲ. ಈ ದೇಶಕ್ಕಾಗಿ ಮನೆಯವರನ್ನೇ ಕಳೆದುಕೊಂಡವರು ಒಂದು ಕೋಟಿ ರೂ. ಅವ್ಯವಹಾರ ಮಾಡುತ್ತಾರೇನ್ರೀ? ಗಾಂಧಿ ಕುಟುಂಬವನ್ನು ವಿಚಾರಣೆಗೆ ಕರೆದ ಕೂಡಲೇ ನಾವು ಮಾನಸಿಕವಾಗಿ ಕುಗ್ಗುವುದಿಲ್ಲ. ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿ, ತ್ಯಾಗ ಬಲಿದಾನ ಮಾಡಿರುವ ಪಕ್ಷ ಕಾಂಗ್ರೆಸ್. ನಮ್ಮನ್ನು ಬಿಜೆಪಿಯವರು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ. ಸತ್ಯಗ್ರಾಹವನ್ನೇ ಮಾಡದವರು, ತ್ಯಾಗ ಬಲಿದಾನವೇ ಗೊತ್ತಿಲ್ಲದ ಬಿಜೆಪಿಯವರಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿ ಇಂತಹ ಗಿಮಿಕ್ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net