ಮೂರು ರಾಜ್ಯದ ಒಡೆಯ ಮಲ್ಲೇಶ್ವರ ಸ್ವಾಮಿ

1001603892
Published on

ವಿ.ಶಿವಾರೆಡ್ಡಿ ಬಂಗಾರಪೇಟೆ: ಮೂರು ರಾಜ್ಯಗಳ ಗಡಿಯಲ್ಲಿರುವ ಪುರಾಣ ಪ್ರಸಿದ್ಧ ಹಾಗೂ ಮೂರು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾದ ಮಲ್ಲಪ್ಪನ ಬೆಟ್ಟದ ಮಲ್ಲೇಶ್ವರಸ್ವಾಮಿ ದೇವಾಲಯವು ಭಕ್ತರು ಮತ್ತು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಬಂಗಾರಪೇಟೆ ತಾಲೂಕು ದೋಣಿಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬತ್ತಲಹಳ್ಳಿಗೆ ಹೊಂದಿಕೊಂಡಿರುವ ಮಲ್ಲಪ್ಪನ ಬೆಟ್ಟದ ಮೇಲೆ ಮಲ್ಲೇಶ್ವರಸ್ವಾಮಿ ದೇಗುಲ ನೂರಾರು ವರ್ಷಗಳ ಇತಿಹಾಸ ಹೊಂದಿದೆ.

ಮೊದಲಿಂದ ದೇಗುಲ ಕರ್ನಾಟಕದ ಮುಜರಾಯಿ ಇಲಾಖೆ ಸುಪರ್ದಿಯಲ್ಲೇ ಇತ್ತು. ಆದರೆ, ಹಲವು ವರ್ಷಗಳ ಹಿಂದೆ ಗಡಿ ವ್ಯಾಪ್ತಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮತ್ತು ಕರ್ನಾಟಕ ಸರ್ಕಾರಗಳ ಮಧ್ಯೆ ಸಂರ್ಷ ಏರ್ಪಟ್ಟು ದೇವಾಲಯ ಯಾವ ರಾಜ್ಯಕ್ಕೆ ಸೇರಿದೆ ಎಂಬ ವಿವಾದ ಸೃಷ್ಟಿಯಾಗಿದೆ.

ಆಂಧ್ರಪ್ರದೇಶ ಸರ್ಕಾರ 7 ವರ್ಷಗಳ ಹಿಂದೆ ಹಳೇ ದೇವಾಲಯ ಕೆಡವಿ ಹೊಸ ದೇಗುಲ ನಿರ್ಮಿಸಿದೆ. ಜತೆಗೆ ಕಲ್ಯಾಣ ಮಂಟಪ, ಕೊಳವೆ ಬಾವಿ ಮೂಲಕ ಕುಡಿಯುವ ನೀರು ಸೇರಿ ಹಲವು ಸೌಲಭ್ಯ ಕಲ್ಪಿಸಿದೆ.

ಆದರೆ, ಇದಕ್ಕೂ ಮುನ್ನ ದೋಣಿಮಡು ಮೂಲಕ ಬೆಸ್ಕಾಂನಿಂದ ಬೆಟ್ಟದ ಮೇಲೆ ವಿದ್ಯುತ್​ ಕಂಬ ಹಾಕಿ ಗರ್ಭಗುಡಿಗೆ ದೋಣಿಮಡು ಪಂಚಾಯಿತಿ ವಿದ್ಯುತ್​ ಒದಗಿತ್ತು.

ಗಡಿಯಲ್ಲಿದ್ದರೂ ಆಂಧ್ರದಲ್ಲಿ ಪ್ರವೇಶ!

ಮಲ್ಲೇಶ್ವರಸ್ವಾಮಿ ದೇವಾಲಯ ಕರ್ನಾಟಕ ಗಡಿ ರೇಖೆಯಲ್ಲಿದ್ದರೂ ದೇವಾಲಯಕ್ಕೆ ಹೋಗುವ ದಾರಿ ಆಂಧ್ರದ ಕುಪ್ಪಂ ವ್ಯಾಪ್ತಿಯಲ್ಲಿದೆ. ಇದೇ ದಾರಿಯಿಂದ ಬೆಟ್ಟದ ಮೇಲಿರುವ ದೊಡ್ಡ ಶಿವಲಿಂಗ ದರ್ಶನಕ್ಕೆ ಹೋಗಬೇಕಾದರೆ ಅದು ತಮಿಳುನಾಡು ಗಡಿ ರೇಖೆಗೆ ಹೊಂದಿಕೊಂಡಿದೆ. ಹೀಗಾಗಿ ಮಲ್ಲೇಶ್ವರಸ್ವಾಮಿ ಮೂರು ರಾಜ್ಯಗಳ ಒಡೆಯ ಅನ್ನೋದು ಸ್ಥಳಿಯರ ನಂಬಿಕೆ.

ಮುಜರಾಯಿ ಅಧಿಕಾರಿಗಳ ಮಧ್ಯೆ ವಿವಾದ

ದೇವಾಲಯದಲ್ಲಿ ಪ್ರತಿವರ್ಷ ಆಚರಿಸುವ ಶಿವರಾತ್ರಿಯಂದು ಭಕ್ತರಿಗೆ ರಕ್ಷಣೆ ಕಲ್ಪಿಸಲು ಮೂರು ರಾಜ್ಯಗಳಿಂದಲೂ ಅವರವರ ವ್ಯಾಪ್ತಿಯಲ್ಲಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗುತ್ತದೆ. ಹಲವು ವರ್ಷಗಳ ಹಿಂದೆ ಭಕ್ತರ ಕಾಣಿಕೆಯ ಹುಂಡಿ ವಿಚಾರದಲ್ಲಿ ಕುಪ್ಪಂ ಮತ್ತು ಬಂಗಾರಪೇಟೆ ಮುಜರಾಯಿ ಇಲಾಖೆ ಅಧಿಕಾರಿಗಳ ಮಧ್ಯೆ ವಿವಾದ ಸೃಷ್ಟಿಯಾಗಿದೆ.

ಪತ್ರಕ್ಕೂ ಸ್ಪಂದಿಸದ ಆಂಧ್ರ ಸರ್ಕಾರ

ಸುಮಾರು ವರ್ಷಗಳಿಂದ ಈ ಬೆಟ್ಟ ಹಾಗೂ ಮೇಲಿನ ದೇವಾಲಯದ ಪ್ರಾಂಗಣ ಆಂಧ್ರಕ್ಕೆ, ಗರ್ಭಗುಡಿ ಕರ್ನಾಟಕಕ್ಕೆ ಹಾಗೂ ಹೊರಗಿನ ಬೃಹತ್​ ಶಿವಲಿಂಗವಿರುವ ಪ್ರದೇಶ ತಮಿಳುನಾಡಿಗೆ ಸೇರುತ್ತದೆ ಎನ್ನಲಾಗುತ್ತಿತ್ತು. ಜತೆಗೆ ಈ ದೇವಾಲಯದ ನಿರ್ವಹಣೆ ಕೂಡಾ ಕರ್ನಾಟಕದ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತಿತ್ತು. ಆ ಕಾರಣಕ್ಕೆ ಶಿವರಾತ್ರಿ ದಿನಗಳಲ್ಲಿ ಬಂಗಾರಪೇಟೆ ತಾಲೂಕು ಕಾಮಸಮುದ್ರ ಪೊಲೀಸರು ಬಂದೋಬಸ್ತ್​ ಮಾಡುತ್ತಿದ್ದರು. ಜತೆಗೆ ಕರ್ನಾಟಕದ ಮುಜರಾಯಿ ಇಲಾಖೆಯಿಂದಲೇ ಅರ್ಚಕರನ್ನು ನೇಮಕ ಮಾಡಿ ವೇತನ ನೀಡಲಾಗುತ್ತಿತ್ತು. ಈ ಎಲ್ಲ ಕಾರಣದಿಂದ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ಗಡಿ ರೇಖೆ ಗುರುತು ಮಾಡಲು ಆಂಧ್ರದ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಆದರೆ, ದೇವಸ್ಥಾನ ಗರ್ಭಗುಡಿ ಯಾವ ರಾಜ್ಯದ ವ್ಯಾಪ್ತಿಗೆ ಸೇರಿದೆ ಎಂಬ ವಿಷಯ ಇಂದಿಗೂ ವಿವಾದವಾಗಿಯೇ ಉಳಿದುಕೊಂಡಿದೆ.

ಮಲ್ಲಪ್ಪನಬೆಟ್ಟ ಎಲ್ಲರ ಆಕರ್ಷಣೆಗೆ ಒಳಗಾಗುತ್ತಿದೆ. ಮಲ್ಲೇಶ್ವರ ಸ್ವಾಮಿ, ಶಿವಲಿಂಗ ದರ್ಶನ, ಬೆಟ್ಟದ ಮೇಲಿನ ಸೊಬಗು ನೋಡಲು ಎಷ್ಟು ಕಣ್ಣುಗಳು ಇದ್ದರೂ ಸಾಲದು.

- ಕೆ.ಎಂ.ನಾರಾಯಣ ಕುಮಾರ್​

ಕಾಮಸಮುದ್ರಂ

ತಿರುಪತಿ ಮಾದರಿಯಲ್ಲಿ ಮಲ್ಲಪ್ಪನ ಬೆಟ್ಟ ಕಂಗೊಳಿಸುತ್ತದೆ. ಕರ್ನಾಟಕ ಗರ್ಭಗುಡಿ, ಆಂಧ್ರದ ಮುಖ್ಯರಸ್ತೆ, ತಮಿಳುನಾಡಿನ ಬೃಹತ್​ ಶಿವಲಿಂಗ ಮೂರು ರಾಜ್ಯಗಳ ಗಡಿಯಲ್ಲಿ ಒಡೆಯನಾಗಿ ಮಲ್ಲೇಶ್ವರ ಸ್ವಾಮಿ ಬೆಟ್ಟದ ಮೇಲೆ ನೆಲೆಸಿರುವುದು ಅದ್ಬುತ.

- ರವಿಮೂರ್ತಿ

ಬಪ್ಪನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net