

ಸಿಂಧನೂರು: ಕಾರ ಹುಣ್ಣಿಮೆ ಕರಿ ಅಂಗವಾಗಿ ಮಲ್ಲಾಪೂರ ಗ್ರಾಮದಲ್ಲಿ ಭಾನುವಾರ ಇಬ್ಬರು ಬಾಲಕಿಯರಿಗೆ ಗ್ರಾಮಸ್ಥರು ಕಲ್ಪಿತ ವಿವಾಹ ಮಾಡಿ ಸಂಭ್ರಮಿಸಿದರು.
ಮದುವೆ ಚಪ್ಪರ ಹಾಕಿಸಿ ಶಾಸ್ತ್ರೋಕ್ತವಾಗಿ ನಿಯಮಗಳನ್ನು ಅನುಸರಿಸುವುದರೊಂದಿಗೆ ವಿವಾಹ ನೆರವೇರಿಸಿದರು. ಮುಂಗಾರಿನಲ್ಲಿ ಉತ್ತಮ ಮಳೆಯಾಗಲಿ ಎಂಬುದು ಈ ಕಲ್ಪಿತ ವಿವಾಹದ ಉದ್ದೇಶವಾಗಿದೆ. ಕಾರಹುಣ್ಣಿಮೆಗೆ 15 ದಿನ ಮುನ್ನ ತೆಂಗಿನ ಚಿಪ್ಪುಗಳಲ್ಲಿ ಬೆಳೆಸಿದ ವಿವಿಧ ಧಾನ್ಯಗಳ ಸಸಿಗಳನ್ನು ಊರ ಮುಂದಿನ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಅವುಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಮಕ್ಕಳ ಮದುವೆ ನೆರವೇರಿಸಲಾಯಿತು.
ಮಕ್ಕಳು ಸೀರೆ ಧರಿಸಿ ಕಲ್ಪಿತ ಮದುವೆಗೆ ಮೆರುಗು ತಂದರು. ಗ್ರಾಮಸ್ಥರು ವಧು-ವರರ ಮೆರವಣಿಗೆ ನಡೆಸಿ ಗ್ರಾಮದಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ವಧು-ವರರು ಸಸಿಗಳನ್ನು ನೆಟ್ಟರೆ ಒಳ್ಳೆಯ ಮಳೆ, ಬೆಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳ ಪೌರೋಹಿತ್ಯದಲ್ಲಿ ನಡೆಯಿತು. ಮಕ್ಕಳು ವಿವಿಧ ವಾದ್ಯ ನುಡಿಸಿದರು. ಗ್ರಾಮದ ಪ್ರಮುಖರಾದ ಮಹಾಕಾಳೆಪ್ಪ, ಮುದಿಯಪ್ಪ ನಾಯಕ, ಅಂಬಣ್ಣ ಗೋನ್ವಾರ, ಹನುಮಂತಪ್ಪ, ದುರುಗಪ್ಪ ಡಿಡಿ, ನಾಗಮ್ಮ, ಭಾಗ್ಯಮ್ಮ, ದುಗ್ಗಪ್ಪ, ಹುಸೇನಮ್ಮ, ಲಕ್ಷ್ಮೀ, ದುರುಗಮ್ಮ, ದೇವಮ್ಮ ಇತರರಿದ್ದರು.