

ರಾಮದುರ್ಗ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ಲಿತಾಂಶ ಭಾನುವಾರ ಹೊರಬಿದ್ದಿದ್ದು, ರಾಮದುರ್ಗ ಮತಕ್ಷೇತ್ರದಿಂದ ಮಲ್ಲಣ್ಣ ಯಾದವಾಡ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಒಟ್ಟು 35 ಮತದಾರರ ಪೈಕಿ ಮಲ್ಲಣ್ಣ ಯಾದವಾಡ 19 ಮತ ಪಡೆದರೆ, ಪ್ರತಿಸ್ಪರ್ಧಿ ಶ್ರೀಕಾಂತ ಢವಣ 16 ಮತ ಪಡೆದು ಪರಾಭವಗೊಂಡಿದ್ದಾರೆ. ಮೂರು ಮತಗಳ ಅಂತರದಲ್ಲಿ ಮಲ್ಲಣ್ಣ ಯಾದವಾಡ ವಿಜಯಶಾಲಿಯಾಗಿದ್ದಾರೆ.
ಈ ಹಿಂದೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಬೆಂಬಲದಿಂದ ಸತತ ನಾಲ್ಕು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಶ್ರೀಕಾಂತ ಢವಣ ಪ್ರಸ್ತುತ ಚುನಾವಣೆಯಲ್ಲಿ ಯಾದವಾಡ ಸಹೋದರರ ವಿರುದ್ಧ ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ತಾಲೂಕಿನಲ್ಲಿ ಮಾಜಿ ಶಾಸಕ, ಸಹೋದರ ಮಹಾದೇವಪ್ಪ ಯಾದವಾಡ ಅವರೊಂದಿಗೆ ತಾಲೂಕಿನಲ್ಲಿ ಜನಸೇವೆ ಸಲ್ಲಿಸಿದ ಅನುಭವ ಹೊಂದಿರುವ ಮಲ್ಲಣ್ಣ ಯಾದವಾಡ ಅವರಿಗೆ ಮತದಾರರು ಆಶೀರ್ವದಿಸಿದ್ದಾರೆ.
ಶಾಸಕ ಪಟ್ಟಣ ಬೆಂಬಲ: ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಶಾಸಕ ಅಶೋಕ ಪಟ್ಟಣ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ ಅಂತಿಮ ಘಳಿಗೆಯಲ್ಲಿ ಕಣದಿಂದ ಹಿಂದೆ ಸರಿದಿದ್ದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ್ಣ ಯಾದವಾಡ ಅವರಿಗೆ ಅಧಿಕೃತ ಬೆಂಬಲ ಘೋಷಿಸಿದ ಹಿನ್ನಲೆಯಲ್ಲಿ ಮಲ್ಲಣ್ಣ ಯಾದವಾಡ ಬಹುಮತದ ಆಯ್ಕೆ ಸಾಧ್ಯವಾಯಿತು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ: ಡಿಸಿಸಿ ಬ್ಯಾಂಕ್ ಚುನಾವಣೆ ಲಿತಾಂಶ ಹೊರಬಿಳುತ್ತಿದ್ದಂತೆ ಬೆಳಗಾವಿ ನಗರ ಸೇರಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ನಿವಾಸದ ಎದುರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.