

ಬೈಲಹೊಂಗಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ವತಿಯಿಂದ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, ಮಲ್ಲಮ್ಮಳ ನಾಡು, ಕುರುಹು ಅಭಿವೃದ್ದಿಪಡಿಸಿ, ಮಲ್ಲಮ್ಮಳ ಶೌರ್ಯ ವಿಶ್ವಕ್ಕೆ ಪರಿಚಯಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ ಅವರು ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಪ್ರಾಧಿಕಾರ ರಚನೆ ಮಾಡಲು ಒತ್ತಾಯಿಸುತ್ತಿದ್ದಾರೆ. ಸ್ವಲ್ಪ ಕಾಲಾವಕಾಶ ಬೇಕಾಗಿದ್ದು, ವೀರ ಮಾತೆಯ ಪ್ರಾಧಿಕಾರ ರಚನೆಗೆ ಉತ್ಸುಕರಾಗಿದ್ದೇವೆ ಎಂದರು.
ವೀರರಾಣಿ ಬೆಳವಡಿ ಮಲ್ಲಮ್ಮನ ಅಶ್ವಾರೂಢ ಮೂರ್ತಿ ಮತ್ತು ಏಳು ನಿಮಿಷದ ಸಾಕ್ಷ ಚಿತ್ರವನ್ನು ಸಚಿವರಿಗೆ ಅರ್ಪಿಸಲಾಯಿತು. ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಪಾಟೀಲ, ಪಾರ್ವತಿ ಕರಿಕಟ್ಟಿ, ಮಲ್ಲವ್ವ ಗೋದಳಿ, ಶಶಿಕಲಾ ಕರಿಕಟ್ಟಿ, ಲಲಿತಾ ಹುಂಬಿ,
ಕಾಂಗ್ರೆಸ್ ಮುಖಂಡ ಪ್ರಕಾಶ ಬಳಿಗಾರ, ಮಹಾಂತೇಶ ಬಳಿಗಾರ ಇದ್ದರು.