ಮಾಳಿಂಗರಾಯನ ಆದರ್ಶಗಳು ಇಂದಿಗೂ ಪ್ರಸ್ತುತ

Malingarayan's ideals are still relevant today
ಬನಹಟ್ಟಿ ಮಾಳಿಂಗರಾಯನ ದೇವಸ್ಥಾನದಲ್ಲಿ ಹಮ್ಮಿಕೊಂಡ ದೈಗೊಂಡ ಗೌಡರ ದರ್ಬಾರ ಹಬ್ಬದಲ್ಲಿ ಹಡಗಲಿ ಗ್ರಾಮದ ಹಾಲಮತದ ಪೂಜಾರಿಗಳಾದ ಮಾಯಣ್ಣ ಪೂಜಾರಿ, ಬನಪ್ಪ ಪೂಜಾರಿ ಡೊಳ್ಳಿನ ಪದಗಳಿಗೆ ಚಾಲನೆ ನೀಡಿದರು.
Published on

ರಬಕವಿ/ಬನಹಟ್ಟಿ; ಹಾಲುಮತದವರ ದೈವ ಹಾಗೂ 14ನೇ ಶತಮಾನದಲ್ಲಿ ಬಾಳಿ ಬದುಕಿ, ಹಲವು ಪವಾಡಗಳನ್ನು ಮಾಡಿದ ಪವಾಡ ಪುರುಷ ಮಾಳಿಂಗರಾಯರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದ ಹಾಲಮತದ ಹಿರಿಯರು ಹಾಗೂ ಮಾಳಿಂಗರಾಯನ ಪೂಜಾರಿಗಳಾದ ಮಾಯಣ್ಣ ಪೂಜಾರಿ ತಿಳಿಸಿದರು.

ಶನಿವಾರ ವಿಜಯದಶಮಿ ನಿಮಿತ್ತ ಬನಹಟ್ಟಿ ಮಾಳಿಂಗರಾಯನ ದೇವಸ್ಥಾನದಲ್ಲಿ ದೈಗೊಂಡ ಗೌಡರ ದರ್ಬಾರ ಹಬ್ಬ(ಕರಿಸಿದ್ಧೇಶ್ವರ ಕರಿಕಟ್ಟಿದ ಹಬ್ಬ) ಚರಿತ್ರೆ ಕುರಿತು ಹಮ್ಮಿಕೊಂಡ ಡೊಳ್ಳಿನ ಪದಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಹುಲಜಂತಿ ಮಹಾಳಿಂಗರಾಯನ ಭಕ್ತಿಗೆ ಮೆಚ್ಚಿದ ಪರಶಿವ ದೇವಾಲಯಕ್ಕೆ ದೀಪಾವಳಿಯ ಅಮಾವಾಸ್ಯೆ ರಾತ್ರಿ ಆಗಮಿಸಿ ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ. ಇದನ್ನು ನೋಡಲು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತ ಸಮೂಹ ಪಾಲ್ಗೊಂಡಿರುತ್ತದೆ ಎಂದರು.

ಬನಪ್ಪ ಪೂಜಾರಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಜತ್ತ ತಾಲೂಕಿನ ಹುಲಜಂತಿಯಲ್ಲಿ ಜರುಗುವ ಮಾಳಿಂಗರಾಯನ ಜಾತ್ರೆಯಲ್ಲಿ ಮುಂಡಾಸ್ ನೋಡಲು 5 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಈ ಮುಂಡಾಸ್ ಯಾವ ದಿಕ್ಕಿನೆಡೆಗೆ ವಾಲಿರುತ್ತದೆ ಎಂಬುದರ ಮೇಲೆ ಮುಂಬರುವ ರಾಜಕೀಯ, ಸಾಮಾಜಿಕ ಹಾಗೂ ಮಳೆ-ಬೆಳೆಯನ್ನು ವಿಶ್ಲೇಷಿಸುವುದು ಇಲ್ಲಿನ ವಿಶೇಷ ಎಂದರು.

ಮಾಳಿಂಗರಾಯರ ಮೂರ್ತಿಗೆ ವಿಶೇಷ ಅಭಿಷೇಕ, ಬುತ್ತಿಪೂಜೆ ಸೇರಿ ಅನೇಕ ಧಾರ್ಮಿಕ ಕಾರ್ಯಗಳು ಜರುಗಿದವು. ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ದೇವಸ್ಥಾನದಲ್ಲಿ ಅನ್ನದಾಸೋಹ ಏರ್ಪಡಿಸಲಾಯಿತು.

ಕುರುಬ ಸಮಾಜದ ಹಿರಿಯರಾದ ಭೀರಪ್ಪ ಜಿಡ್ಡಿಮನಿ, ಸಿದ್ದಮಲ್ಲಪ್ಪ ಜಿಡ್ಡಿಮನಿ, ಭೀರಪ್ಪ ಭುಜಂಗ, ಹಣಮಂತ ಕುಡಚಿ, ರಾಮು ಜಿಡ್ಡಿಮನಿ, ಮಾರುತಿ ಮಹೇಷವಾಡಗಿ, ಮಲ್ಲಪ್ಪ ಹುನ್ನೂರ, ಮಾಳಪ್ಪ ಕರಿಗಾರ, ಕಾಡಪ್ಪ ತುಂಗಳ, ಪರಸಪ್ಪ ಜಿಡ್ಡಿಮನಿ, ಸಿಂಗಾಡಿ ಗೊಂಗಡಿ, ಯಲ್ಲಪ್ಪ ಮಹೇಷವಾಡಗಿ, ಕರೆಪ್ಪ ಭುಜಂಗ, ಪರಶುರಾಮ ಜಂಗನವರ, ಯಲ್ಲಪ್ಪ ಸಂಗೊಳ್ಳಿ, ರಮೇಶ ಜಿಡ್ಡಿಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net