ಮುದ್ದೇಬಿಹಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಗರಂ ಆದ ಶಾಸಕರು

malfeasance, MLA, slum, title deed, sewage board, investigation, encroachment,
ಮುದ್ದೇಬಿಹಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು. ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರು, ಸಿಬ್ಬಂದಿ ಇದ್ದಾರೆ.
Published on

ಮುದ್ದೇಬಿಹಾಳ: ಪಟ್ಟಣದ ಇಂದಿರಾನಗರ ಸೇರಿ ಹಲವೆಡೆ ಕೊಳಚೆ ಮಂಡಳಿಯ ಮನೆಗಳ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಗರಂ ಆದ ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು, ಕೊಳಚೆ ಪ್ರದೇಶದ ನಿವಾಸಿಗಳಲ್ಲದವರಿಗೂ ಹಕ್ಕುಪತ್ರ ನೀಡಿದ್ದು ಅಕ್ಷಮ್ಯ, ಆಶ್ರಯ ಸಮಿತಿ ಗಮನಕ್ಕೆ ತರದೆ ಮಾಡಿರುವ ಇದನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಬೇಕಾಗುತ್ತದೆ ಎಂದು ಹರಿಹಾಯ್ದರು.

ಪುರಸಭೆಯಲ್ಲಿ ಶುಕ್ರವಾರ ಸಂಜೆ ಬಹಳ ಹೊತ್ತು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಸಭೆಯಲ್ಲಿದ್ದ ಕೊಳಚೆ ಮಂಡಳಿಯ ಎಇಇ ಶಿವಾನಂದ ರಾಠೋಡ, ಎಇ ಪ್ರಹ್ಲಾದ ಪಾಟೀಲ, ಮೀನಾಕ್ಷಿ ಚೂರಿ ಅವರನ್ನು ಸದಸ್ಯರೆದುರೇ ತರಾಟೆಗೆ ತೆಗೆದುಕೊಂಡು ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಗರಂ ಆದರು.

ನಿಜವಾದ ಅರ್ಹರು ಹಕ್ಕುಪತ್ರ ಪಡೆದಿದ್ದರೆ ಯಾವುದೇ ತಕರಾರು ಇಲ್ಲ. ಆದರೆ ಅರ್ಹರಲ್ಲದವರೂ ಹಕ್ಕುಪತ್ರ ಪಡೆದುಕೊಂಡಿರುವುದರ ಮರ್ಮವೇನು ಎಂದು ಕುಟುಕಿದರು.

ಚರ್ಚೆ ಮುಂದುವರಿದಾಗ ಸದಸ್ಯರಾದ ಯಲ್ಲಪ್ಪ ನಾಯಕಮಕ್ಕಳ, ಹಣಮಂತ ಭೋವಿ ಇನ್ನಿತರರು ಬೇರೆ ಜಿಲ್ಲೆ, ತಾಲೂಕಿನವರಿಗೂ ಕೊಳಚೆ ಪ್ರದೇಶದಡಿ ಹಕ್ಕುಪತ್ರ ನೀಡಲಾಗಿದೆ. ಎಲ್ಲ ಹಕ್ಕುಪತ್ರಗಳನ್ನು ರದ್ದುಗೊಳಿಸಿ ಶಾಸಕರ ನೇತೃತ್ವದಲ್ಲಿ ಮತ್ತೊಮ್ಮೆ ಮರುಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಮಹಿಬೂಬ ಗೊಳಸಂಗಿ ಮಧ್ಯಪ್ರವೇಶಿಸಿ ಕೊಳಚೆ ಮಂಡಳಿ ಅಧಿಕಾರಿಗಳ ನಿರ್ಲಕ್ಷೃದಿಂದ ಅವ್ಯವಹಾರ ನಡೆದಿರುವ ಸಂಶಯ ಇದೆ. ಇದು ಪುರಸಭೆಗೆ ಕಳಂಕ ತಂದಿಟ್ಟಂತಾಗಿದೆ. ಇದಕ್ಕೆ ಯಾರೇ ಕಾರಣ ಇದ್ದರೂ ನಿಷ್ಪಕ್ಷಪಾತ ತನಿಖೆ ನಡೆದು ಹಗರಣ ಹೊರಗೆ ಬರಬೇಕು ಎಂದರು. ಶಿವು ಶಿವಪುರ, ಗೋಪಿ ಮಡಿವಾಳರ ಮಾತನಾಡಿದರು.

ಪುರಸಭೆ ಕಚೇರಿ ಹಿಂಭಾಗದಲ್ಲಿರುವ ಬೆಂಗಳೂರು ಅಯ್ಯಂಗಾರ ಬೇಕರಿ ಅತಿಕ್ರಮಣ, ಕೆರೆ ಒತ್ತುವರಿ, ಮುಖ್ಯರಸ್ತೆಗಳ ಕಾರ್ನರ್ ಸೈಟ್ ತೆರವು, ತೆರಿಗೆ ವಸೂಲಾತಿ, ಅಮೃತ ಜಲ ಯೋಜನೆ, ನಗರ ಸ್ವಚ್ಛತೆ, ಕುಡಿಯುವ ನೀರು, ಕೆರೆ ಅಭಿವೃದ್ಧಿ, ಬೀದಿ ಬದಿ ತರಕಾರಿ ಮಾರಾಟ ತಡೆಗಟ್ಟುವುದು, ಒಳಚರಂಡಿ ಯೋಜನೆಯಡಿ ಮನೆಮನೆ ಸಂಪರ್ಕ ಕಲ್ಪಿಸಿ ಬಲಪಡಿಸುವುದು, ಪಟ್ಟಣದ ವಿವಿಧ ಸ್ಥಳಗಳಲ್ಲಿ ಅಂದಾಜು 8 ಬಸ್ ಶೆಲ್ಟರ್ ನಿರ್ಮಿಸುವುದು, ತಂಗಡಗಿ ರಸ್ತೆ ಸರ್ವೆ ನಂಬರ್ 57, 59ರಲ್ಲಿ ಅತಿಕ್ರಮಣ, ದೇವೂರ ಜಾಕ್‌ವೆಲ್‌ಗೆ ಬಳಸುವ ವಿದ್ಯುತ್ ಕಂಬಗಳಿಗೆ ರೈತರು ಪಂಪ್‌ಸೆಟ್ ಸಂಪರ್ಕ ಪಡೆದಿದ್ದನ್ನು ತೆರವುಗೊಳಿಸುವುದು ಸೇರಿ ಹಲವು ಮಹತ್ವದ ಚರ್ಚೆಗಳು ಸಭೆಯಲ್ಲಿ ನಡೆದವು. ಆದರೆ ಯಾವುದಕ್ಕೂ ಸ್ಪಷ್ಟ ತೀರ್ಮಾನ ತೆಗೆದುಕೊಂಡಿದ್ದು ಕಂಡು ಬರಲಿಲ್ಲ.

ಪುರಸಭೆಯ ಆರೋಗ್ಯ ವಿಭಾಗದ ಜಾವೀದ ನಾಯ್ಕೋಡಿ ಇನ್ನಿತರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದಾಗ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಇನ್ನು ಮುಂದೆ ಕರ್ತವ್ಯದಲ್ಲಿ ನಿರ್ಲಕ್ಷೃ ಕಂಡಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಸಂತೆ ದಿನ ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೆ ಯಾವುದೇ ವಾಹನ ಹೋಗದಂತೆ ನೋಡಿಕೊಳ್ಳಬೇಕು. ಅಲ್ಲಲ್ಲಿ ತರಕಾರಿ ಮಾರುವವರಿಗೆ ಸೈನಿಕ ಮೈದಾನ, ಕೆರೆಯ ಹತ್ತಿರದ ಹೊಸ ಮಾರುಕಟ್ಟೆಯಲ್ಲೇ ತರಕಾರಿ ಮಾರುವಂತೆ ಸೂಚಿಸಬೇಕು. ಹಳೇ ಪೊಲೀಸ್ ಕ್ವಾರ್ಟಸ್ ಮುಂಭಾಗದಿಂದ ಶಾರದಾದೇವಿ ಗುಡಿಯವರೆಗೆ ಸಂತೆ ದಿನ ತರಕಾರಿ ಮಾರಾಟಕ್ಕೆ ಅವಕಾಶ ನೀಡಿ ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎನ್ನುವ ಸಲಹೆಗಳು ಕೇಳಿಬಂದವು.

ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ, ಶಾಸಕರ ನೇತೃತ್ವದಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತಂದು ಕರೆ ಅಭಿವೃದ್ಧಿ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಮಾಹಿತಿ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net