ಉತ್ತರ ಕನ್ನಡದಲ್ಲಿ 5 ವರ್ಷಗಳಿಂದ ಸ್ಥಳೀಯ ಹೊಸ ಮಲೇರಿಯಾ ಪ್ರಕರಣ ಇಲ್ಲ

Maleriya Day
Published on

ಕಾರವಾರ: ಮಲೇರಿಯಾ ನಿರ್ಮೂಲನೆಯ ಹಾದಿಯಲ್ಲಿ ಜಿಲ್ಲೆಯ ಆರೋಗ್ಯಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಹೇಳಿದರು.

ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಲೇರಿಯಾ ರೋಗದ ನಿರ್ಮೂಲನೆ ಕುರಿತಂತೆ ಆಶಾ, ಮತ್ತು ಅಂಗನವಾಡಿ ಕಾರ್ಯಕರ್ತೆರು, ವೈದ್ಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸವ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಕಾರಿ ಡಾ.ರಮೇಶ್ ರಾವ್ ಮಾತನಾಡಿ, ಪ್ರತಿ ವರ್ಷ ವಿಶ್ವ ಮಲೇರಿಯಾ ದಿನವನ್ನು ಏ.25 ರಂದು ಆಚರಿಸಲಾಗುತ್ತದೆ. ದೇಶದಲ್ಲಿ 2030 ರೊಳಗೆ ಮಲೇರಿಯಾ ಕೊನೆಗೊಳಿಸಲು ಗುರಿಯನ್ನು ಹೊಂದಲಾಗಿದೆ. ಅದರಂತೆ ರಾಜ್ಯದಲ್ಲಿ ಕೂಡ 2027 ರ ವೇಳೆಗೆ ಮೆಲೇರಿಯಾವನ್ನು ಅಂತ್ಯಗೊಳಿಸುವ ಉದ್ದೇಶವನ್ನು ಹೊಂದಿದೆ.

2018 ರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಮಲೇರಿಯಾ ಪ್ರಕಟಣಗಳಿಲ್ಲ. ಕಟ್ಟಡ ಕಾಮಗಾರಿ ಹಾಗೂ ಮೀನುಗಾರಿಕೆಗಾಗಿ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಲ್ಲಿ ಕೆಲವು ಪ್ರಕರಣಗಳು ಕಂಡುಬಂದಿದ್ದು, ಅವುಗಳನ್ನು ನಿಯಂತ್ರಿಸಲಾಗಿದೆ. ಸ್ಥಳೀಯ ಶೂನ್ಯ ಮಲೇರಿಯಾ ಪ್ರಕರಣಗಳನ್ನು ಸಾಧಿಸಿದ್ದರೂ ದೇಶ ಮತ್ತು ರಾಜ್ಯದಲ್ಲಿ ಮಲೇರಿಯಾ ಕೊನೆಗೊಳ್ಳುವರೆಗೂ ಮಲೇರಿಯಾ ರೋಗವನ್ನು ಪತ್ತೆ ಹಚ್ಚುವುದು ಹಾಗೂ ಪ್ರಕರಣ ಕಂಡು ಬಂದಲ್ಲಿ ಶೀಘ್ರ ಚಿಕಿತ್ಸೆ ನೀಡುವ ಕಾರ್ಯ ಮುಂದುವರಿಸಲಾಗುವುದು.

ಮಲೇರಿಯಾ ಹಾಗೂ ಹಲವು ರೋಗಗಳ ಕುರಿತು ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ರೋಗಗಳ ನಿವಾರಣೆಗೆ ಕ್ರಮ ವಹಿಸುವರು ಎಂದರು. ಜಾಥಾದಲ್ಲಿ ಬಾಪೂಜಿ, ಛತ್ರಪತಿ ನರ್ಸಿಂಗ್ ಕಾಲೇಜ್, ಸರ್ಕಾರಿ ಜಿಎನ್‌ಎಂ ನರ್ಸಿಂಗ್ ಕಾಲೇಜ್‌ನ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು. ಪ್ರಭಾರ ಡಿಎಚ್‌ಒ ಡಾ. ಶಂಕರ ರಾವ್, ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ್, ಡಾ.ಹೇಮಗಿರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net