ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳಿ

maleriya
World Malaria Day
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳುವುದೇ ಮಲೇರಿಯಾದಿಂದ ತಪ್ಪಿಸಿಕೊಳ್ಳಲು ಇರುವ ಪರಿಣಾಮಕಾರಿ ಮಾರ್ಗ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಮಾತನಾಡಿದರು. ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು, ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಬೇಕು ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲ ಕ್ರಮಗಳ ಬಗ್ಗೆ ಜನರು ಜಾಗೃತಗೊಳ್ಳಬೇಕು ಎಂದು ಹೇಳಿದರು. ಮಲೇರಿಯಾ ಹರಡುವ ಸೊಳ್ಳೆಗಳಿಂದ ರಕ್ಷಣೆ ಪಡೆಯುವ ಬಗ್ಗೆ ಆರೋಗ್ಯ ಇಲಾಖೆ ವತಿಯಿಂದ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ,ಮಲೇರಿಯಾ ವಿರುದ್ಧ ಹೋರಾಡುವ ಜಾಗತಿಕ ಪ್ರಯತ್ನದ ಅಂಗವಾಗಿ ಎಲ್ಲೆಡೆ ವಿಶ್ವ ಮಲೇರಿಯಾ ದಿನ ಆಚರಿಸಲಾಗುತ್ತಿದೆ ಮಲೇರಿಯಾವನ್ನು ನಿರ್ಮೂಲನೆ ಮಾಡುವುದು ಮತ್ತು ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.
ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ. ಮಲೇರಿಯಾ ಜ್ವರ ಹೆಚ್ಚಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಂಡುಬರುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಮಾರಣಾಂತಿಕವಾಗಲಿದೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂಥ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಬಾರದು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದು ಹೇಳಿದರು.
ಮಲೇರಿಯಾ ಗುಣಪಡಿಸಬಹುದು: ಮಲೇರಿಯಾ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದರೂ, ಇದನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು. ಸೊಳ್ಳೆ ಕಡಿತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ದೊಡ್ಡಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ಹೇಳಿದರು.ಆರಂಭಿಕ ಚಿಕಿತ್ಸೆಯು ಮಲೇರಿಯಾದಿಂದ ಕಾಯಿಲೆ ಮತ್ತು ಮಲೇರಿಯಾದಿಂದ ಸಾವಿನ ಪ್ರಮಾಣ ಕಡಿಮೆ ಮಾಡುತ್ತದೆ. ಎಲ್ಲ ವಯಸ್ಸಿನ ಜನರಿಗೆ ಮಲೇರಿಯಾ ಜ್ವರ ಬರಬಹುದು. ಆದರೆ ಗರ್ಭಿಣಿಯರು, ಚಿಕ್ಕ ಮಕ್ಕಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಬೇಗ ಸೋಂಕಿಗೆ ತುತ್ತಾಗುತ್ತಾರೆ ಎಂದರು.
ಹೋರಾಟ ತೀವ್ರಗೊಳಿಸೋಣ: ವಿಶ್ವ ಮಲೇರಿಯಾ ದಿನದ ಅಂಗವಾಗಿ ಹೆಚ್ಚು ಸಮಾನತೆಯ ಜಗತ್ತಿಗೆ, ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯದೊಂದಿಗೆ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶ್ವ ಮಲೇರಿಯಾ ದಿನದ ಅರಿವು ಮೂಡಿಸುವ ಸಲುವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಿಂದ ನಗರದ ಟಿ.ಬಿ ವೃತ್ತದ ವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಮಾನವ ನಿರ್ಮಿತ ಸರಪಳಿ ರಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net