

ಯಲ್ಲಾಪುರ: ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ರಜತ ಮಹೋತ್ಸವ ಏ. 20ರಂದು ಎಪಿಎಂಸಿ ರೈತಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಗಂಟೆಗೆ ರಜತ ಮಹೋತ್ಸವವನ್ನು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸುವರು. ಕಾನೂನು ಸಚಿವ ಎಚ್.ಕೆ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮಧ್ಯಾಹ್ನ 12.30ರಿಂದ ವಿಭಾ ಹೆಗಡೆ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಹಕಾರಿ ಗೋಷ್ಠಿ ನಡೆಯಲಿದ್ದು, ಭಾಸ್ಕರ ಹೆಗಡೆ ಕಾಗೇರಿ, ಎಸ್.ಜಿ. ಹೆಗಡೆ, ಬಸವರಾಜ ನಡುವಿನಮನಿ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ಶಾಸಕ ಶಿವರಾಮ ಹೆಬ್ಬಾರ ವಹಿಸಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಲಿದ್ದಾರೆ. ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಗುವುದು. ಸಂಜೆ 7 ಗಂಟೆಗೆ ಪ್ರಸಿದ್ಧ ಕಲಾವಿದರಿಂದ ದಕ್ಷ-ಯಜ್ಞ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೆಪಾಲ, ನಿರ್ದೇಶಕರಾದ ಎಂ.ಆರ್. ಹೆಗಡೆ ತಾರೇಹಳ್ಳಿ, ಎಂ.ಪಿ. ಹೆಗಡೆ ಚವತ್ತಿ, ಗಣಪತಿ ಹೆಗಡೆ ಬೆದೆಹಕ್ಲ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ, ಇತರರಿದ್ದರು.