ಕನಮಡಿಯ ವರಸಿದ್ದಿ ವಿನಾಯಕ ಶಾಲೆಯಲ್ಲಿ ‘ಮಳೆಗಾಲದ ಮೊಗ್ಗು’ ಕಾರ್ಯಕ್ರಮ

KANAMADI SCHOOL
ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ವರಸಿದ್ಧಿ ವಿನಾಯಕ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಪಾಲಕರ ದಿನ, ಸಂಭ್ರಮ ಶನಿವಾರ ಹಾಗೂ ಮಳೆಗಾಲದ ಮೊಗ್ಗು ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಮಾನಿಂಗ ಜವನರ ಉದ್ಘಾಟಿಸಿದರು. ಎಂ.ಪಿ. ಕಗ್ಗೋಡ, ಶಿವಾನಂದ ಅಂಗಡಿ, ಬಾಬುಗೌಡ ಐ. ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಇಂದಿನ ಮಕ್ಕಳನ್ನು ನಾಳಿನ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಕೂಡ ಬಹಳ ಮಹತ್ವದ್ದು ಎಂದು ಕನಮಡಿ ಗ್ರಾಪಂ ಅಧ್ಯಕ್ಷ ಮಾನಿಂಗ ಜವನರ ಅಭಿಪ್ರಾಯಿಸಿದರು.

ತಿಕೋಟಾ ತಾಲೂಕಿನ ಕನಮಡಿ ಗ್ರಾಮದ ವರಸಿದ್ಧಿ ವಿನಾಯಕ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ದಿನ, ಸಂಭ್ರಮ ಶನಿವಾರ ಹಾಗೂ ಮಳೆಗಾಲದ ಮೊಗ್ಗು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ನಮ್ಮ ಮಕ್ಕಳು ನಮ್ಮ ದೇಶದ ಸಂಸ್ಕೃತಿಯನ್ನು ಮರೆತು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರನ್ನು ಸರಿಯಾದ ದಾರಿಗೆ ತರುವಲ್ಲಿ ಶಿಕ್ಷಕರ ಜೊತೆ ಪಾಲಕರು ಸಹಿತ ಕೈಜೋಡಿಸಬೇಕು ಎಂದರು.

ಪಿಡಿಒ ಎಂ.ಪಿ. ಕಗ್ಗೋಡದವರ ಮಾತನಾಡಿ, ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ನೀಡಿದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿ ಹುಟ್ಟಿದ ನಾಡಿನಲ್ಲಿ ನಾವೆಲ್ಲ ಇರುವುದೇ ನಮ್ಮ ಭಾಗ್ಯ. ನಮ್ಮ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.

ಕೆವಿಜಿಬಿನ ಮುಖ್ಯ ವ್ಯವಸ್ಥಾಪಕ ಶಿವಾನಂದ ಅಂಗಡಿ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ನಮ್ಮ ದೇಶದ ದೊಡ್ಡ ಸಂಪತ್ತು. ಅಂತಹ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಸಿ ಅವರನ್ನು ಒಳ್ಳೆಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದರು.

ವೈದ್ಯಾಧಿಕಾರಿ ಐ.ಎಸ್. ಪಾಟೀಲ ಮಾತನಾಡಿ, ಇಂದಿನ ಕಾಲದಲ್ಲಿ ಮಕ್ಕಳು ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಆರೋಗ್ಯದ ಜೊತೆ ಶುಚಿತ್ವದ ಕಡೆಗೆ ಗಮನ ಹರಿಸಲು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಾಬುಗೌಡ ಐ. ಬಿರಾದಾರ ಮಾತನಾಡಿ, ಮಕ್ಕಳ ಪ್ರಗತಿಗೆ ನಮ್ಮ ಸಂಸ್ಥೆ ಸದಾ ಸಿದ್ಧವಿದೆ. ಪಾಲಕರು ನಮ್ಮ ಜೊತೆ ಕೈ ಜೋಡಿಸಿ ನಿಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದರು.

ಶಿಕ್ಷಕ ಹಾಗೂ ಸಾಹಿತಿ ಆರ್.ಎಸ್. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಮಾಜ ಕಟ್ಟುವಲ್ಲಿ ಅನ್ನ ಕೊಡುವ ರೈತನಿಂದ ಹಿಡಿದು ಗಡಿ ಕಾಯುವ ಸೈನಿಕರ ಜೊತೆ ಶಾಲಕ-ಪಾಲಕ -ಬಾಲಕರ ಪಾತ್ರ ಬಹಳ ಮಹತ್ವದ್ದು. ಫ್ಯಾಶನ್ ಕಾಲದಲ್ಲಿ ಮೋಜು ಮಸ್ತಿ ಬಿಟ್ಟು ದೇಹಪ್ರೇಮ ತೊರೆದು ಪರಿಸರ ಪ್ರೇಮದ ಜೊತೆ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಬಿರಾದಾರ, ಪಿ.ಕೆ. ಪಾಟೀಲ, ಗುಲಾಬ್ ತಿಕೋಟಿ, ಅಶ್ವಿನಿ ದುಂಡಿ, ಸುರೇಶಗೌಡ ಪಾಟೀಲ, ಸುನೀಲ ಬಿರಾದಾರ, ಶಿವಾನಂದ ಪೂಜಾರಿ, ಮನೋಹರಗೌಡ ಬಿರಾದಾರ ಮತ್ತಿತರರಿದ್ದರು.

ಶಿಕ್ಷಕಿ ಎ.ಎ. ಅನಂತಪೂರ ನಿರೂಪಿಸಿದರು. ಬಿ.ಆರ್.ಬಿರಾದಾರ ಸ್ವಾಗತಿಸಿದರು. ಎಸ್.ಕೆ. ಮಠಪತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net