

ಮಲೇಬೆನ್ನೂರು: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ನಿರ್ಲಕ್ಷೃ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಎಚ್ಚರಿಕೆ ನೀಡಿದರು.
ಸೋಂಕು ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪುರಸಭೆ, ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಈವರೆಗೆ ಮೂರು ಪ್ರಕರಣ ಕಂಡು ಬಂದಿವೆ. ಪುರಸಭೆ, ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸಮನ್ವಯವಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಸೋಂಕು ದಿನೇದಿನೆ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಪತ್ತೆ, ಸೋಂಕು ನಿಯಂತ್ರಣ ಕಾರ್ಯ ಹಾಗೂ ಸುರಕ್ಷತಾ ಕಾರ್ಯದಲ್ಲಿ ನಿರ್ಲಕ್ಷೃವಹಿಸುವುದು ಬೇಡ ಎಂದರು.
ತಾಲೂಕು ವೈದ್ಯಾಧಿಕಾರಿ ಚಂದ್ರಮೋಹನ್ ಮಾತನಾಡಿ, ಸಾರ್ವಜನಿಕರು ರೋಗದ ವಿರುದ್ಧ ಹೋರಾಡಬೇಕು ಹೊರತು ಸೋಂಕಿತರ ವಿರುದ್ಧ ಅಲ್ಲ. ಹೊರ ರಾಜ್ಯಗಳಿಂದ ಬಂದವರು ಹಾಗೂ ಮನೆಗಳಲ್ಲಿ ಪ್ರತ್ಯೇಕ ವಾಸದ ವ್ಯವಸ್ಥೆ ಇಲ್ಲದವರಿಗೆ ಗುತ್ತೂರಿನ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಉಪ ತಹಸೀಲ್ದಾರ್ ರವಿ ಮಾತನಾಡಿ, ವರದಿ ಶೀಘ್ರ ಬಂದರೆ ನಾವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಿಪಿಐ ಶಿವಪ್ರಸಾದ್ ಮಾತನಾಡಿ, ಪೊಲೀಸ್ ಸಿಬ್ಬಂದಿ ಕೊರತೆಯಿದ್ದು, ಸೀಲ್ಡೌನ್ ಪ್ರದೇಶದಲ್ಲಿ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿರಬೇಕು ಎಂದರು ತಿಳಿಸಿದರು.
ಪಿಎಸ್‌ಐ ವೀರಬಸಪ್ಪ ಕುಸಲಾಪುರ , ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯ ನಿರೀಕ್ಷಕ ಗುರುಪ್ರಸಾದ್, ನವೀನ್ ಕಟ್ಟಿಮನಿ, ಮಲೇಬೆನ್ನೂರು ವೈದ್ಯಾಧಿಕಾರಿ ಲಕ್ಷ್ಮೀದೇವಿ ಇದ್ದರು.