ಮಲೇಬೆನ್ನೂರಲ್ಲಿ ಹಿಂದು ಮಹಾಸಭಾ ಗಣೇಶ ವಿಸರ್ಜನೆ; ಪಟ್ಟಣದಾದ್ಯಂತ ಬಿಗಿ ಭದ್ರತೆ ಕೆಎಸ್‌ಆರ್‌ಪಿ, ಡಿಎಆರ್ ತುಕಡಿ ನಿಯೋಜನೆ, ನೂರಕ್ಕೂ ಹೆಚ್ಚು ಸಿಸಿ ಕ್ಯಾಮರಾ, 2 ದ್ರೋಣ್ ಕ್ಯಾಮರಾ ಬಳಕೆ

Malebennur, Police Path Sanchalana, Hindu Mahaganapati,
Published on

ಮಲೇಬೆನ್ನೂರು: ಪಟ್ಟಣದ ನೀರಾವರಿ ಇಲಾಖೆ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಹಿಂದು ಮಹಾಸಭಾ ಮಹಾಗಣಪತಿ ವಿಸರ್ಜನೆ ಬುಧವಾರ ಜರುಗಲಿದ್ದು, ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ.

ಮೆರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್‌ಗಾಗಿ ದಾವಣಗೆರೆ ಗ್ರಾಮಾಂತರ ವಿಭಾಗದ ಎಎಸ್‌ಪಿ ನೇತೃತ್ವದಲ್ಲಿ ತಲಾ 12 ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಒಬ್ಬ ಡಿವೈಎಸ್ಪಿ, 5 ಸಿಪಿಐ, 12 ಪಿಎಸ್‌ಐ, 25 ಎಎಸ್‌ಐ ಹಾಗೂ 181 ಸಿಬ್ಬಂದಿಯ ಪೊಲೀಸ್ ಪಡೆ ಭದ್ರತೆ ಕಲ್ಪಿಸಲಿದೆ.

ಒಟ್ಟು 100ಕ್ಕಿಂತ ಹೆಚ್ಚು ಸಿಸಿ ಕ್ಯಾಮರಾ, 2 ದ್ರೋಣ್ ಕ್ಯಾಮರಾ ಜತೆಗೆ 10ಕ್ಕಿಂತ ಹೆಚ್ಚು ಕ್ಯಾಮರಾಗಳನ್ನು ವಿಡಿಯೋ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಿಪಿಐ ಯು.ಸತೀಶ್ ಕುಮಾರ್ ವಿಜಯವಾಣಿಗೆ ತಿಳಿಸಿದರು.

ಮೆರಬವಣಿಗೆಗೆ ಸಿದ್ದೇಶ್ವರ್ ಚಾಲನೆ: ಬುಧವಾರ ಬೆಳಗ್ಗೆ 12 ಗಂಟೆಗೆ ಪೂಜೆ ಸಲ್ಲಿಸುವ ಮೂಲಕ ಬೃಹತ್ ಮೆರವಣಿಗೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಚಾಲನೆ ನೀಡುವರು. ನೀರಾವರಿ ಇಲಾಖೆಯಿಂದ ಆರಂಭವಾಗುವ ಮೆರವಣಿಗೆ ಶಿವಮೊಗ್ಗ-ಹರಿಹರ ಮುಖ್ಯ ರಸ್ತೆ, ಸಂತೆ ರಸ್ತೆ, ಬಸವೇಶ್ವರ ಬಡಾವಣೆ, ಬನ್ನಿ ಮಹಾಕಾಳಿ ಮಂಟಪ, ನಂದಿಗುಡಿ ರಸ್ತೆ, ಪೇಟೆ ಬೀದಿ, ಕಲ್ಲೇಶ್ವರ ಬಡಾವಣೆ, ಕಾಲಭೈರವ ರಸ್ತೆ, ಶಂಕರ ಮಂದಿರ ರಸ್ತೆ, ಏಕನಾಥೇಶ್ವರಿ ದೇವಸ್ಥಾನ ರಸ್ತೆ, ಜ್ಯೋತಿ ಟಾಕೀಸ್ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದ್ದು, ಭದ್ರಾ ಚಾನಲ್ಗೆ ತೆರಳಿ ಗಣಪತಿ ವಿಸರ್ಜನೆ ಮಾಡಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ವೈ.ಚಂದ್ರಶೇಖರ್ ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಈಶ್ವರ, ಶ್ರೀರಾಮ, ಛತ್ರಪತಿ ಶಿವಾಜಿ, ವೀರ ಸಾವರ್ಕರ್ ಭಾವಚಿತ್ರದೊಂದಿಗೆ ನಾಸಿಕ್ ಡೋಲ್, ತಮಟೆ, ಡೊಳ್ಳು, ವೀರಗಾಸೆ, ಭಟ್ಕಳದ ಚಂಡಿಕಾ ವಾದ್ಯ ಕಲಾ ಮೇಳ ಭಾಗವಹಿಸಲಿದ್ದು, ಸಹಸ್ರಾರು ಜನ ಭಾಗವಹಿಸುವ ನಿರೀಕ್ಷೆಯಿದೆ. ಹತ್ತು ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾರ್ಗ ಬದಲಾವಣೆ: ಸೆ.14ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹೊನ್ನಾಳಿಯಿಂದ ಹರಿಹರಕ್ಕೆ ಸಂಚರಿಸುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಾಹನಗಳು ಕೊಮಾರನಹಳ್ಳಿ ಚಾನಲ್ ಮೂಲಕ, ಗುಡ್ಡದ ಬೇವಿನಹಳ್ಳಿ, ಜಿಗಳಿ, ಕುಂಬಳೂರು ಮಾರ್ಗವಾಗಿ ಹರಿಹರ ತಲುಪಲು ವ್ಯವಸ್ಥೆ ಮಾಡಲಾಗಿದೆ. ಹರಿಹರದಿಂದ ಹೊನ್ನಾಳಿಗೆ ಹೋಗುವ ವಾಹನಗಳಿಗೆ ಕುಂಬಳೂರು ಗ್ರಾಮದ ಮೂಲಕ ನಿಟ್ಟೂರು, ಹರಳಹಳ್ಳಿ, ಹಾಲಿವಾಣ, ಕೊಮಾರನಹಳ್ಳಿ ಕೆರೆ ಏರಿ ಮೂಲಕ ಹೊನ್ನಾಳಿ ಕಡೆಗೆ ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ವಾಹನಗಳ ನಿಲುಗಡೆ ಸ್ಥಳ: 1. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ(ಜಿಗಳಿ ಸರ್ಕಲ್). 2. ನಿಟ್ಟೂರ್ ರಸ್ತೆಯ ಗೋದಾಮು ಮುಂಭಾಗ (ನಿಟ್ಟೂರು ರಸ್ತೆ). 3. ಕಾಲಭೈರವೇಶ್ವರ ದೇವಸ್ಥಾನ ಹತ್ತಿರದ ಮೈದಾನ (ಹರಳಹಳ್ಳಿ ರಸ್ತೆ) 4. ರಾಜಕುಮಾರ್ ಬಡಾವಣೆ ಮೈದಾನ. ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಈ ನಾಲ್ಕು ಸ್ಥಗಳಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net