ಮಲೇಬೆನ್ನೂರಲ್ಲಿ ವಿಘ್ನೇಶ್ವರನ ಹವಾ... ವೈಭವದ ವಿದಾಯ

Malebennur, Hindu Mahaganapati Dissolution, Procession, DJ Sound,
Published on

ಮಲೇಬೆನ್ನೂರು:  ಕಣ್ಣು ಹಾಯಿಸಿದಷ್ಟು ದೂರ ಜನವೋ ಜನ...ಮಧ್ಯೆ ಅಲ್ಲಲ್ಲಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದ ಯುವ ಸಮೂಹ...ಅದ್ದೂರಿ ಮೆರವಣಿಗೆಯಲ್ಲಿ ರಾರಾಜಿಸುತ್ತಿದ್ದ ಕೇಸರಿ ಬಾವುಟ...ತೆರೆದ ವಾಹನದಲ್ಲಿ ಕಂಗೊಳಿಸುತ್ತಿದ್ದ ವೈಭವದ ಬೃಹತ್ ಗಣೇಶ ವಿಗ್ರಹ !

‘ಮಲೇಬೆನ್ನೂರು ರೈಸ್’ ಪ್ರಸಿದ್ಧಿಯ ಪಟ್ಟಣದಲ್ಲಿ ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೂ ಕಂಡುಬಂದ ಚಿತ್ರಣವಿದು. ಇಲ್ಲಿನ ನೀರಾವರಿ ಇಲಾಖೆ ಮೈದಾನದಲ್ಲಿ ಇದೇ ಪ್ರಪ್ರಥಮವಾಗಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ವಿಸರ್ಜನೆ ಮೆರವಣಿಗೆ ಸಂಭ್ರಮದಿಂದ ಕೂಡಿತ್ತು. ರಂಗು ರಂಗಿನ ಕಲರವ ಮೂಡಿತ್ತು.

ಅನೇಕ ವಾಹನಗಳಲ್ಲಿ ಅಳವಡಿಸಿದ್ದ ಡಿಜೆ ಸೌಂಡ್, ಗಣೇಶನ ಕುರಿತ ಭಕ್ತಿ ಸುಧೆಯ ಗಾಯನಗಳಿಗೆ ಮಕ್ಕಳು, ಯುವತಿಯರು ಸೇರಿ ವಿವಿಧೆಡೆಗಳಿಂದ ಬಂದಿದ್ದ ಕಲಾ ತಂಡಗಳು ಆಕರ್ಷಕ ನೃತ್ಯ ಪ್ರದರ್ಶಿಸಿ ರಂಜಿಸಿದರು.

ನೀರಾವರಿ ಇಲಾಖೆ ಮೈದಾನದಲ್ಲಿ ನಿರ್ಮಿಸಿದ್ದ ಅಲಂಕೃತ ಮಂಟಪದಲ್ಲಿ ಗಣೇಶ ಚತುರ್ಥಿಯಿಂದ ಇಂದಿನವರೆಗೆ 15 ದಿನಗಳ ಕಾಲ ಪ್ರತಿಷ್ಠಾಪಿತನಾಗಿದ್ದ ಮೊದಲೊಂದೀಪಿತ ಬುಧವಾರ ಬೆಳಗ್ಗೆ ಕೊನೆಯ ಪೂಜೆ ನೆರವೇರಿಸಿಕೊಂಡು ಅಲಂಕೃತ ತೆರೆದ ವಾಹನದಲ್ಲಿ ವಿರಾಜಮಾನನಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಹಳೇ ವೃತ್ತವನ್ನು ರಾಜವೈಭವದ ಮಾದರಿಯಲ್ಲಿ ಸಿಂಗರಿಸಲಾಗಿತ್ತು. ಜಿಗಳಿ ವೃತ್ತ, ಬನ್ನಿ ಮಂಟಪ ವೃತ್ತ ಕಂಗೊಳಿಸುತ್ತಿದ್ದವು. ನಿರೀಕ್ಷೆ ಮೀರಿ ಬಂದಿದ್ದ ಭಕ್ತರು ಗಣೇಶನನ್ನು ಕಣ್ತುಂಬಿಕೊಂಡು ಪುನೀತರಾದರು. ಮೆರವಣಿಗೆ ಉದ್ದಕ್ಕೂ ಪ್ರಸಾದ ವಿತರಣೆ ನಡೆಯುತ್ತಿತ್ತು.

ತಳಿರು ತೋರಣ, ವಿದ್ಯುತ್ ಅಲಂಕಾರ: ಈ ಗಣೇಶ ವಿಸರ್ಜನೆ ಪಟ್ಟಣದಲ್ಲಿ ಹಬ್ಬ, ಜಾತ್ರೆ, ರಥೋತ್ಸವದಂತೆ ಭಾಸವಾಯಿತು. ರಾಜ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ ವೈಭವದ ಸ್ವಾಗತ ಕೋರುವ ಜತೆಗೆ ಭಕ್ತ ಸಮೂಹ ಹಣ್ಣು-ಕಾಯಿ ಸಮರ್ಪಿಸಿ ಬೀಳ್ಕೊಡುತ್ತಿದ್ದರು. ಗಣೇಶ ಸಾಗುವ ಮಾರ್ಗದಲ್ಲಿ ಸಂಜೆ ವೇಳೆ ಕಲರ್ ಕಲರ್ ವಿದ್ಯುತ್ ಅಲಂಕಾರದ ಮಿನುಗು, ಹೊಳಪಿತ್ತು.

ಸಂಸದ ಸಿದ್ದೇಶ್ವರ್ ಚಾಲನೆ: ವಿಸರ್ಜನೆ ಅಂಗವಾಗಿ ವಿನಾಯಕನಿಗೆ ಬೆಳಗ್ಗೆಯೇ ತರಹೇವಾರಿ ಪುಷ್ಪಗಳಿಂದ ಪೂಜೆ ಸಲ್ಲಿಸಲಾಗಿತ್ತು. ಬೆಳಗ್ಗೆ 10.30ರ ಹೊತ್ತಿಗಾಗಲೇ ಗಣಪತಿ ಪೆಂಡಾಲ್ ಇದ್ದ ಆವರಣ ಜನರಿಂದ ಕಿಕ್ಕಿರಿದಿತ್ತು. 11 ಗಂಟೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತೊಮ್ಮೆ ವ್ನಿೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ವೈಭವದ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಗಣೇಶ ಮೂರ್ತಿ ಹೊತ್ತ ತೆರೆದ ವಾಹನ ನೀರಾವರಿ ಇಲಾಖೆ ಮೈದಾನದಿಂದ ಹೊರ ಬರುತ್ತಿದ್ದಂತೆ ಭಕ್ತರಿಂದ ಹರ ಹರ ಮಹಾದೇವ, ಗಣಪತಿ ಬಪ್ಪ ಮೋರಯಾ ಘೋಷಣೆ ಮೊಳಗಿದವು.

ಕಲಾ ತಂಡಗಳ ಮೆರುಗು: ಮೆರವಣಿಗೆಯಲ್ಲಿ ನಾಸಿಕ್ ಡೋಲು, ಭಟ್ಕಳದ ಚಂಡೆ, ಟ್ರ್ಯಾಶ್ ಮತ್ತಿತರೆ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು. ತಮಟೆ, ಡೊಳ್ಳು, ವೀರಗಾಸೆ, ಕಲಾ ಮೇಳಗಳಿಂದ ಕೂಡಿದ್ದ ಮೆರವಣಿಗೆಯಲ್ಲಿ ಈಶ್ವರ, ಶ್ರೀರಾಮ, ಛತ್ರಪತಿ ಶಿವಾಜಿ, ವೀರ ಸಾವರ್ಕರ್ ಭಾವಚಿತ್ರಗಳು, ಸ್ತಬ್ಧಚಿತ್ರಗಳು ರಾರಾಜಿಸಿದವು.
ಯುವ ಸಮೂಹದ ಅತ್ಯುತ್ಸಾಹ: ಇನ್ನು, ಮೆರವಣಿಗೆಯುದ್ದಕ್ಕೂ ಡಿಜೆ ಹಾಡಿಗೆ ಯುವಕ-ಯುವತಿಯರು, ಮಹಿಳೆಯರು ಹೆಜ್ಜೆ ಹಾಕಿದರು. ಡಿಜೆ ಹಾಡು ಹಾಕುತ್ತಿದ್ದಂತೆ ಯುವ ಸಮೂಹ ಕುಣಿದು ಕುಪ್ಪಳಿಸುತ್ತಿತ್ತು. ಬೆಳಗ್ಗೆ 11ಕ್ಕೆ ಆರಂಭವಾದ ಡಿಜೆ ಗಾನಸುಧೆ ಗಣೇಶ ವಿಸರ್ಜನೆವರೆಗೂ ನೃತ್ಯಕ್ಕೆ ಪ್ರೇರೇಪಣೆ ನೀಡಿತು. ಕನ್ನಡ, ಹಿಂದಿ ಸಿನಿಮಾದ ಹಾಡುಗಳಿಗೆ ಯುವ ಸಮೂಹ ನೃತ್ಯ ಪ್ರದರ್ಶಿಸುತ್ತ ಸಾಗಿತು. ಅತ್ಯುತ್ಸಾಹ ನಿಯಂತ್ರಿಸಲು ಪೊಲೀಸರು, ಗಣೇಶ ಸಮಿತಿ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.

ಬಿಗಿ ಭದ್ರತೆ: ಪ್ರಮುಖ ಬೀದಿಗಳಲ್ಲಿ ರಾತ್ರಿವರೆಗೂ ಅದ್ದೂರಿ ಮೆರವಣಿಗೆ ಸಂಚರಿಸಿತು. ಭದ್ರಾ ಚಾನೆಲ್ನಲ್ಲಿ ಶಾಸ್ತ್ರೋಕ್ತವಾಗಿ ಶ್ರೀ ಗಣೇಶ ವಿಸರ್ಜನೆ ನಿರ್ವಿಘ್ನವಾಗಿ ಜರುಗಿತು. ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರವೇಶ ನಿರ್ಬಂಧಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ ನಿಯೋಜಿಸಿತ್ತು. ಸುಂಆರು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 100ಕ್ಕಿಂತ ಹೆಚ್ಚು ಸಿಸಿ ಕ್ಯಾಮರಾ, 2 ದ್ರೋನ್ ಕ್ಯಾಮರಾ 10ಕ್ಕಿಂತ ಹೆಚ್ಚು ವಿಡಿಯೋ ಚಿತ್ರೀಕರಣ ಕ್ಯಾಮರಾಗಳನ್ನು ಬಳಸಿಕೊಂಡು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿತ್ತು.

ಮಲೇಬೆನ್ನೂರು ಕೇಸರಿಮಯ: ಗಣೇಶ ಮೂರ್ತಿ ವಿಸರ್ಜನೆಯ ಈ ದಿನ ಮಲೇಬೆನ್ನೂರು ಸಂಪೂರ್ಣ ಕೇಸರಿಮಯವಾಗಿತ್ತು. ಪಟ್ಟಣದ ಪ್ರಮುಖ ರಸ್ತೆ, ವೃತ್ತ ಹಾಗೂ ಪ್ರತಿಮೆಗಳ ಸುತ್ತ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ಕಟ್ಟಲಾಗಿತ್ತು. ಪೊಲೀಸರು ಪಟ್ಟಣದ ಹೊರವಲಯದಲ್ಲಿ ನಾಕಾಬಂದಿ ಹಾಕಿದ್ದರು. ಮೆರವಣಿಗೆಯಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಿಪಂ ಮಾಜಿ ಸದಸ್ಯ ವಾಗೀಶ ಸ್ವಾಮಿ, ಮುಖಂಡರಾದ ಚಂದ್ರಶೇಖರ್ ಪೂಜಾರ್, ನಂದಿಗಾವಿ ಶ್ರೀನಿವಾಸ್, ಸಮಿತಿ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ವೈ.ಚಂದ್ರಶೇಖರ್, ಪೂಜರ್ ರಾಜು, ಬಿ.ಮಂಜುನಾಥ, ಬಿ.ಚಂದ್ರಣ್ಣ, ಓಜಿ ಕುಮಾರ, ಎ.ಕೆ. ಲೋಕೇಶ್, ಜಿಗಳಿ ಹನುಮಗೌಡ, ಸಿರಿಗೆರೆ ರಾಜಣ್ಣ, ಕೆಜಿ ಪರಮೇಶಪ್ಪ, ಚಿಟಕಿ ನಾಗರಾಜ್ ಮತ್ತು ಪುರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net