ಲೋಕ ಕಲ್ಯಾಣಕ್ಕಾಗಿ ಬಂದ ಮಹದೇಶ್ವರರು

22 mlv 1
ಮಳವಳ್ಳಿ ತಾಲೂಕಿನ ಸಂಶೆಟ್ಟಿಪುರ ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಚನ್ನಬಸವಸ್ವಾಮಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಹಾಂತಸ್ವಾಮಿ, ಸಿದ್ದಮಲ್ಲಸ್ವಾಮೀಜಿ, ಗೌರಿಶಂಕರ ಶ್ರೀ, ಸೌಮ್ಯನಾಥಸ್ವಾಮಿ, ಶಿವನಂದಾಪುರಿ ಶ್ರೀ ಇದ್ದರು.
Published on

ಮಳವಳ್ಳಿ: ಉತ್ತರ ದೇಶದಿಂದ ಲೋಕ ಕಲ್ಯಾಣಕ್ಕಾಗಿ ಬಂದ ಪವಾಡ ಪುರುಷ ಮಲೆ ಮಹದೇಶ್ವರರು ದಕ್ಷಿಣ ಭಾಗದಲ್ಲಿ ಸಂಚರಿಸಿದ ಸ್ಥಳಗಳೆಲ್ಲವೂ ಪುಣ್ಯ ಕ್ಷೇತ್ರಗಳಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೇಂದ್ರಗಳಾಗಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಸಂಶೆಟ್ಟಿಪುರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿದ್ದ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನವನ್ನು ಶುಕ್ರವಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೀನರ ಉದ್ಧಾರಕ್ಕಾಗಿ ಕಲಿಯುಗದಲ್ಲಿ ಜನ್ಮ ತಳೆದವರು ಮಹದೇಶ್ವರರು. ತಮ್ಮ ಪವಾಡಗಳ ಮೂಲಕವೇ ದುರ್ಜನರ ಮನ ಪರಿವರ್ತನೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು. ಇಂದಿಗೂ ನಮ್ಮಲ್ಲಿ ಮಾದಪ್ಪ ನಡೆದಾಡಿದ ಕಡೆಗಳಲ್ಲಿ ಹಲವಾರು ಕುರುಹುಗಳನ್ನು ಕಾಣಬಹುದಾಗಿದೆ ಎಂದರು.

ಮಾದಪ್ಪನ ನೆನೆದರೆ ಸಂಕಷ್ಟಕ್ಕೆ ಪರಿಹಾರ ದೊರೆಯುತ್ತದೆಂಬ ನಂಬಿಕೆ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ತೆರಳುವವರ ಸಂಖ್ಯೆಯೇ ಸಾಕ್ಷಿ. ಅಪಾರವಾದ ಭಕ್ತ ಸಮೂಹವನ್ನೇ ಹೊಂದಿರುವ ಮಹದೇಶ್ವರರು ವೈಭವವನ್ನು ಆಪೇಕ್ಷಪಟ್ಟವರಲ್ಲ. ದೇವಾಲಯದ ಹೊರಗಡೆ ವಿಶಾಲವಾಗಿದ್ದರೂ ಅವರು ನೆಲೆಗೊಂಡಿರುವ ಗರ್ಭಗುಡಿ ಮಾತ್ರ ಕಿರಿದಾಗಿರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಭೂಮಂಡಲದ ಜೀವ ಸಂಕುಲವೆಲ್ಲ ಭಗವಂತನ ಪ್ರೇರಣೆಯಿಂದಲೇ ಘಟಿಸುತ್ತಿದೆ. ನಮ್ಮ ದೇಹವೆಂಬ ಚರ್ಮದ ಚೀಲದಲ್ಲಿ ಉಸಿರಾಗಿರುವನೇ ದೈವವಾಗಿದ್ದು, ಅದು ಸ್ತಬ್ಧವಾದರೆ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇವೆ. ಹಾಗಾಗಿ ನಾನು, ನನ್ನದು ಎಂಬ ಆಡಂಬರವನ್ನು ಬದಿಗಿಟ್ಟು ಸರಳ ಜೀವನ ಸಾಗಿಸುವ ಮೂಲಕ ಅಧ್ಯಾತ್ಮದಲ್ಲಿ ನೆಮ್ಮದಿ ಬದುಕು ಸಾಗಿಸುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮಿ, ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಹಾಂತಸ್ವಾಮಿ, ಸಿದ್ದಮಲ್ಲಮಹಾಸ್ವಾಮಿ, ಗೌರಿಶಂಕರ ಶ್ರೀ, ಸೌಮ್ಯನಾಥಸ್ವಾಮಿ, ಶಿವನಂದಾಪುರಿ ಶ್ರೀ ಸೇರಿದಂತೆ ಹಲವು ಮಠಾಧೀಶರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net