

ಮಂಗಳೂರು: ಕಳೆದ ಹಲವು ದಿನಗಳಿಂದ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ಕರಾವಳಿಗೆ ಬುಧವಾರ ಮಳೆಯ ಸಿಂಚನವಾಗಿದೆ. ಕರಾವಳಿಯ ಗ್ರಾಮೀಣ ಭಾಗದಲ್ಲಿ ಮಳೆಯಾಗಿದ್ದು, ಕೃಷಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರು ತಾಲೂಕಿನ ಸವಣೂರು, ಸುಳ್ಯ, ಕಡಬ ತಾಲೂಕಿನ ಹಲವೆಡೆ ಮಳೆಯಾಗಿದೆ. ಜತೆಗೆ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸುತ್ತಮುತ್ತ ಸಾಧಾರಣ ಗುಡುಗು ಸಹಿತ ಮಳೆಯಾಗಿದೆ. ಕಡಬ ತಾಲೂಕಿನ ಸವಣೂರು, ಚಾರ್ವಾಕದಲ್ಲಿ ಅರ್ಧ ಗಂಟೆಗೂ ಹೆಚ್ಚು ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಹನಿ ಮಳೆಯಾದರೆ ಕೆಲವು ಕಡೆ ಸಿಡಿಲು ಸಹಿತ ಮಳೆಯಾಗಿದೆ. ಮಂಗಳೂರಿನ ಸುತ್ತಮುತ್ತ ಗುಡುಗು ಸಹಿತ ಹನಿ ಮಳೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಮಾ.11 ರಿಂದ 4 ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಈಗಲೇ ಬಿಸಿಲು ಹೆಚ್ಚಾಗಿರುವುದರಿಂದ ಎಪ್ರಿಲ್ ತಿಂಗಳಿನಲ್ಲಿ ಬಹುತೇಕ ಪೂರ್ವ ಮುಂಗಾರು ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಹೆಚ್ಚಾಗಿದೆ.
*ಇನ್ನೆರಡು ದಿನ ಮಳೆ
ಇನ್ನೆರಡುದಿನ ಕಾಸರಗೋಡು ಜಿಲ್ಲೆಯಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಪ್ರದೇಶಗಳ ಒಂದೆರಡು ಕಡೆ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಡುಪಿಯ ಕಾರ್ಕಳ ಸುತ್ತಮುತ್ತ ಸಹ ಸಂಜೆ ಅಥವಾ ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್ 17ರ ನಂತರ ಗಾಳಿಯ ವೇಗ ಶ್ರೀಲಂಕಾ ಬಳಿಯ ತಿರುವಿಕೆಯ ಮತ್ತಷ್ಟು ಪಶ್ಚಿಮಕ್ಕೆ ಚಲಿಸಿದ್ದು, ಅಲ್ಲೇ ಶಿಥಿಲಗೊಳ್ಳುವ ಸಾಧ್ಯತೆಯಿರುವುದರಿಂದ ಕರಾವಳಿಗೆ ಮಳೆ ಕ್ಷೀಣವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
--------------
ತುಂಬೆ ಡ್ಯಾಂ ನೀರಿನ ಮಟ್ಟ ಕುಸಿತ
ಮಂಗಳೂರು: ಕಳೆದ 15ದಿನಗಳಿಂದ ತುಂಬೆ ಡ್ಯಾಂನಲ್ಲಿ ತುಸು ಕುಸಿತಗೊಂಡಿದೆ. 0.30 ಮೀ. ಇಳಿಕೆಯಾಗಿ ಬುಧವಾರ ತುಂಬೆ ಡ್ಯಾಂನಲ್ಲಿ 5.70ಮಿ. ನೀರು ಶೇಖರಣೆಗೊಂಡಿದೆ. ಡ್ಯಾಂನಲ್ಲಿ ಮಾ.11ರಂದು ನೀರಿನ ಮಟ್ಟ 5.85 ಮೀ. ಇದೆ. ಕಳೆದ ವರ್ಷ 6 ಮೀ, ಹಾಗೂ 2023ರ ಇದೇ ದಿನದಂದು 5.60 ಮೀ. ಇತ್ತು. 2022, 2021, 2020 ರಲ್ಲಿ ಕ್ರಮವಾಗಿ 6 ಮೀ. ಇತ್ತು. 2019ರಲ್ಲಿ 5.32 ಮೀ. ಇತ್ತು. ಪ್ರಸ್ತುತ ಕಳೆದ ವರ್ಷ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಸಂಗ್ರಹ ಸಾಕಷ್ಟಿದ್ದು, 18.71ಮಿ.ನೀರಿದೆ. ಕಳೆದ ವರ್ಷ ಹಾಗೂ ಅದಕ್ಕೂ ಮುನ್ನ ವರ್ಷದ ಇದೇ ದಿನದಂದು 18.50 ಮೀ. ನೀರು ಸಂಗ್ರಹವಿತ್ತು. ಗ್ರಾಮೀಣ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ತುಂಬೆ ಡ್ಯಾಂನ ಒಳಹರಿವಿನಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
------------------