

ಆರ್.ತುಳಸಿಕುಮಾರ್
ಬೆಂಗಳೂರು: ನಗರದಿಂದ ಬಳ್ಳಾರಿ ರಸ್ತೆ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ) ತಲುಪಲು ನಿರ್ಮಿಸಿರುವ ಸಿಗ್ನಲ್ ಮುಕ್ತ ಎಲಿವೇಟೆಡ್ ಮಾರ್ಗದ ಸರ್ವಿಸ್ ರಸ್ತೆ ಬದಿ ಮಳೆನೀರು ಹರಿದುಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ.
ಭಾರೀ ಮಳೆ ಬಂದಲ್ಲಿ ಹೆಬ್ಬಾಳದಿಂದ ಸಾದಹಳ್ಳಿ ಟೋಲ್ ಕೇಂದ್ರದ ವರೆಗೆ ಮಾರ್ಗದುದ್ದಕ್ಕೂ ನೀರುನಿಂತು ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ. ಸರ್ವಿಸ್ ರಸ್ತೆಗಳ ಬಳಿ ಸರಾಗವಾಗಿ ನೀರು ಹರಿಯದೆ ಅಲ್ಲೇ ಮಡುಗಟ್ಟಿ ನಿಲ್ಲುವುದರಿಂದ ಸಂಚಾರ ಸಂಚಕಾರಕ್ಕೆ ಆಸ್ಪದ ನೀಡಿದೆ. ಸರಿಸುಮಾರು 21 ಕಿ.ಮೀ. ಉದ್ದಕ್ಕೂ ಎಲಿವೇಟೆಡ್ ಮಾರ್ಗದ ಎರಡೂ ಬದಿ ಮಳೆನೀರು ಹರಿಯಲು ಸಮರ್ಪಕ ವ್ಯವಸ್ಥೆಯೇ ಇಲ್ಲ. ಸರ್ವಿಸ್ ರಸ್ತೆ ಬದಿ ನಿರ್ಮಿಸಿರುವ ಬಾಕ್ಸ್ ಮಾದರಿಯ ಕಾಲುವೆ ಚರಂಡಿಯೋ ಅಥವಾ ಮಳೆನೀರು ಹರಿಯುವ ಕಾಲುವೆಯೊ ಎಂಬ ಅನುಮಾನ ಮೂಡಿಸುತ್ತಿದೆ.
ಈ ಮಾರ್ಗದುದ್ದಕ್ಕೂ ಹೊಂದಿಕೊಂಡಿರುವ ಬಡಾವಣೆ ಹಾಗೂ ಹಳ್ಳಿಗಳಿಗೆ ಮಳೆನೀರು ನುಗ್ಗಿ ಸಮಸ್ಯೆ ಉಂಟುಮಾಡುತ್ತಿದೆ. ಜತೆಗೆ ಹೋಟೆಲ್ ಹಾಗೂ ವಾಣಿಜ್ಯ ಕೇಂದ್ರಗಳಿಂದ ಸೀವೇಜ್ ನೀರು ಈ ಚರಂಡಿಯಲ್ಲಿ ಹರಿಯಬಿಡಲಾಗಿದೆ. ಸಂಜೆ ಬಳಿಕ ಚರಂಡಿಯಿಂದ ಸೀವೇಜ್ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ತ್ಯಾಜ್ಯನೀರಿನ ಮೇಲೆಯೇ ಚಲಿಸುವ ವಾಹನಗಳು ರಸ್ತೆ ಬದಿ ಹಾದುಹೋಗುವ ಜನರ ಮೇಲೆ ಹಾರಿ ಕೊಳಕು ಮಾಡುತ್ತಿವೆ. ಎಲಿವೇಟೆಡ್ ರಸ್ತೆಗೆ ನೀಡುವ ಆದ್ಯತೆ ಸರ್ವಿಸ್ ರಸ್ತೆಗೆ ನೀಡದ ಕಾರಣ ಇಡೀ ಮಾರ್ಗ ಸಾಮಾನ್ಯ ರಸ್ತೆಯಾಗಿ ಮಾರ್ಪಟ್ಟಿದೆ.
ನಿರ್ವಹಣೆ ಇಲ್ಲದೆ ಸಮಸ್ಯೆ ಸೃಷ್ಟಿ:
2013ರಲ್ಲಿ ಎನ್‌ಎಚ್‌ಎಐ ಖಾಸಗಿ ಸಹಭಾಗಿತ್ವದಲ್ಲಿ ಹೆಬ್ಬಾಳದಿಂದ ಸಾದಹಳ್ಳಿ ಗೇಟ್‌ವರೆಗೆ ಸಿಗ್ನಲ್ ಮುಕ್ತ ಎಲಿವೇಟೆಡ್ ಮಾರ್ಗವನ್ನು ನಿರ್ಮಿಸಿದೆ. ಇದಕ್ಕಾಗಿ 680 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮೊತ್ತದಲ್ಲಿ ಎಲಿವೇಟೆಡ್ ರಸ್ತೆ, ಸರ್ವಿಸ್ ರಸ್ತೆ, ಬಸ್ ಶೆಲ್ಟರ್, ಪಾದಚಾರಿ ಮಾರ್ಗ, ರಸ್ತೆಬದಿ ಡ್ರೈನ್‌ಗಳನ್ನು ನಿರ್ಮಿಸುವ ಪ್ರಸ್ತಾಪ ಇತ್ತು. ಆದರೆ, ಬೇಗನೆ ಕೆಲಸ ಪೂರ್ಣಗೊಳಿಸುವ ಭರದಲ್ಲಿ ವಿವಿಧ ಸೌಲಭ್ಯಗಳು ಅರೆಬರೆಯಾಗಿ ಮುಕ್ತಾಯಗೊಳಿಸಲಾಗಿದೆ. ನಂತರ ರಸ್ತೆ ನಿರ್ವಹಣೆ ಹೊಣೆಯನ್ನು ಸುಂಕ ಸಂಗ್ರಹ ಕಂಪನಿಗೆ ವಹಿಸಲಾಗಿದೆ. ಆದರೆ, ಗುತ್ತಿಗೆ ಪಡೆದಿರುವ ಕಂಪನಿ ಸಮರ್ಪಕವಾಗಿ ಕೆಲಸ ಮಾಡದ ಕಾರಣ ಮಾರ್ಗದುದ್ದಕ್ಕೂ ಸಮಸ್ಯೆಗಳು ಬಗೆಹರಿಯದೆ ಹಾಗೆಯೇ ಉಳಿದಿವೆ.
ಮುಖ್ಯವಾಗಿ ಹೆಬ್ಬಾಳ ಕೆರೆ ಬಳಿ, ಚಿಕ್ಕಜಾಲ ಕೆರೆ ಬಳಿ ಹಾಗೂ ಬಿಎಸ್‌ಎ್ ಕೇಂದ್ರದ ಎರಡೂ ಬದಿ ತಲಾ 1 ಕಿ.ಮೀ. ಉದ್ದಕ್ಕೂ ಸರ್ವಿಸ್ ರಸ್ತೆಯನ್ನೇ ನಿರ್ಮಿಸಿಲ್ಲ. ಈ ಸ್ಥಳಗಳಲ್ಲಿ ಮಳೆ ಬಂದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದರೂ, ಎನ್‌ಎಚ್‌ಎಐ ಕೂಡ ಪರಿಹಾರ ಒದಗಿಸಲು ವಿಲವಾಗಿದೆ. ಸರ್ವಿಸ್ ರಸ್ತೆಯ ಎರಡೂ ಬದಿಯಿರುವ ಚರಂಡಿಗಳಲ್ಲಿ ಖಾಸಗಿಯವರು ಕೇಬಲ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಮಳೆನೀರು ಸರಾಗವಾಗಿ ಹರಿಯದೆ ಹೂಳು ತುಂಬಿಕೊಂಡಿದೆ. ವರ್ಷಗಳಿಂದ ಹೂಳು ತೆಗೆಯದ ಕಾರಣ ಮಳೆನೀರು ರಸ್ತೆ ಮೇಲೆ ಹರಿಯುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಸಮನ್ವಯಕ್ಕೆ ಸೂಚನೆ:
ಇತ್ತೀಚಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಬಳ್ಳಾರಿ ರಸ್ತೆಯಲ್ಲಿ ಮಳೆಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಚರಂಡಿಯಲ್ಲಿ ಹೂಳು ಎತ್ತದೆ ವರ್ಷಗಳೇ ಆಗಿದೆ ಎಂಬ ಮಾಹಿತಿ ಪಡೆದು ಚಕಿತಗೊಂಡರು. ವರ್ಷಕ್ಕೊಮ್ಮೆಯಾದರೂ ಹೂಳೆತ್ತಬೇಕೆಂಬ ನಿಯಮ ಇದ್ದರೂ, ಗುತ್ತಿಗೆ ಕಂಪನಿ ನಿರ್ಲಕ್ಷ್ಯ ವಹಿಸಿದ್ದು ಹೇಗೆ ಎಂದ ಎನ್‌ಎಚ್‌ಎಐ ಅಧಿಕಾರಿಗಳನ್ನು ಪ್ರಶ್ನಿಸಿದರೂ ಉತ್ತರಿಸಲಿಲ್ಲ. ಕೊನೆಗೆ ಬಿಬಿಎಂಪಿ, ಜಲಮಂಡಳಿ, ಎನ್‌ಎಚ್‌ಎಐ ಹಾಗೂ ಗುತ್ತಿಗೆ ಕಂಪನಿ ಸಮನ್ವಯ ಸಾಧಿಸಿ ಚರಂಡಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ.
ಬಸ್ ಶೆಲ್ಟರ್‌ಗಳಿಲ್ಲದೆ ಸಮಸ್ಯೆ:
ಕೆಐಎ ಮಾರ್ಗದುದ್ದಕ್ಕೂ 15 ಸ್ಥಳಗಳಲ್ಲಿ ಬಸ್ ನಿಲುಗಡೆ ಸ್ಥಳಗಳಿವೆ. ಇಲ್ಲಿ ನಿರ್ಮಿಸಿರುವ ಶೆಲ್ಟರ್‌ಗಳು ಗೂಡಂಗಡಿಗಳಂತಿದ್ದು, 8-10 ಮಂದಿ ಮಾತ್ರ ಆಸರೆ ಪಡೆಯಬಹುದು. ಭಾರೀ ಮಳೆ ಬಂದಲ್ಲಿ ಸಾರ್ವಜನಿಕರು ತೋಯ್ದು ತೊಪ್ಪೆಯಾಗುವ ಸ್ಥಿತಿ ಇದೆ. ಕೆಲವೆಡೆ ರಸ್ತೆಯ ಒಂದು ಬದಿ ಮಾತ್ರ ಶೆಲ್ಟರ್ ನಿರ್ಮಿಸಿದ್ದು, ಇನ್ನೊಂದು ಬದಿ ಸೌಲಭ್ಯ ಒದಗಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಮಾರ್ಗದಲ್ಲಿ ಸಾವಿರಾರು ಮಂದಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದರೂ, ಶೆಲ್ಟರ್‌ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಆಗಿಲ್ಲ. ಕೆಲವು ಸ್ಥಳಗಳಲ್ಲಿ ಒಮ್ಮೆಲೇ 100 ಮಂದಿ ನಿಲ್ದಾಣಕ್ಕೆ ಬಂದರೂ ಬಿಸಿಲು, ಮಳೆಯಿಂದ ಆಸರೆ ಪಡೆಯಲಾರದೆ ಸಮಿಪದ ಅಂಗಡಿಗಳ ಬಳಿ ನಿಲ್ಲುವಂತಾಗಿದೆ.
ಎಲ್ಲೆಲ್ಲಿ ಸಮಸ್ಯೆ?:
* ಹೆಬ್ಬಾಳ ಕೆರೆ ಕೋಡಿ, ಎಸ್ಟೀಮ್ ಮಾಲ್ ಬಳಿ
* ಸಹಕಾರನಗರ ಪ್ರವೇಶ ಮಾರ್ಗದ ಬಳಿ
* ಅಳ್ಳಾಳಸಂದ್ರ ರೈಲ್ವೆ ಅಂಡರ್‌ಪಾಸ್ ಬಳಿ
* ಯಲಹಂಕ ರೈತರ ಸಂತೆ ಸಮೀಪ
* ಕೋಗಿಲು ಲೇಔಟ್ ಕ್ರಾಸ್ ಸಮೀಪ
* ಬಿಎಸ್‌ಎ್ ಕೇಂದ್ರದ ಎರಡೂ ಬದಿ
* ಹುಣಸಮಾರಣಹಳ್ಳಿ ಕೆರೆ, ಬಸ್ ನಿಲ್ದಾಣ ಬಳಿ
* ಬೆಟ್ಟಹಲಸೂರು ಬಸ್ ನಿಲ್ದಾಣ ಬಳಿ
* ಚಿಕ್ಕಜಾಲ ಕೆರೆ, ದೊಡ್ಡಜಾಲ ರೈಲ್ವೆ ಗೇಟ್ ಬಳಿ
* ಮೀನಕುಂಟೆ ಹೊಸೂರು, ಸಾದಹಳ್ಳಿ ಕ್ರಾಸ್ ಬಳಿ
ಹೆಬ್ಬಾಳ ಕೆರೆ ಬಳಿ ಸರ್ವಿಸ್ ರಸ್ತೆ ಇಲ್ಲದೆ ವಾಹನ ಸಂಚಾರ ಹಳಿ ತಪ್ಪಿದ್ದು, ನಿತ್ಯವೂ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆ ಮೇಲೆ ಬಿದ್ದ ನೀರು ಚರಂಡಿಯಲ್ಲಿ ಹರಿಯುವಂತೆ ಮಾಡದ ಕಾರಣ ನೇರವಾಗಿ ಕೆರೆ ಕೋಡಿ ಸೇರುತ್ತಿದೆ. ರಾತ್ರಿ ವೇಳೆ ಜನರು ಸಂಚರಿಸಲು ಸರಿಯಾದ ದೀಪದ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗಿದೆ.
- ಮಂಜುನಾಥ್, ಹೆಬ್ಬಾಳ
ಏರ್‌ಪೋರ್ಟ್ ರಸ್ತೆ ಉದ್ದಕ್ಕೂ ಚರಂಡಿ ನಿರ್ಮಿಸಿದ್ದರೂ ಅದರಲ್ಲಿ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಅಲ್ಲಿ ಸಂಗ್ರಹಗೊಂಡಿರುವ ಹೂಳನ್ನು ಹಲವು ವರ್ಷಗಳಿಂದ ತೆಗೆದೇ ಇಲ್ಲ. ಟೋಲ್ ಶುಲ್ಕ ವಸೂಲಿಗೆ ಇರುವ ಕಾಳಜಿ ನಾಗರಿಕರಿಗೆ ಸೌಲಭ್ಯ ಒದಗಿಸಬೇಕೆಂಬ ಜವಾಬ್ದಾರಿ ಗುತ್ತಿಗೆ ವಹಿಸಿರುವ ಕಂಪನಿಗೆ ಇದ್ದಂತಿಲ್ಲ.
- ರಾಕೇಶ್, ಸಹಕಾರನಗರ