ಜೀವ ಜಲ ಸಂರಕ್ಷಣೆಗಾಗಿ ಪರಿಸರ ಉಳಿಸಿ

12 mlv 2
Published on

 ಮಳವಳ್ಳಿ : ಲಕ್ಷಾಂತರ ಜೀವರಾಶಿಗಳ ಉಳಿವಿಗಾಗಿಯೇ ಇರುವ ಜೀವ ಜಲ ಸಂರಕ್ಷಣೆಗಾಗಿ ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಬಿ.ಜಿ.ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಜು ತಿಳಿಸಿದರು. ಬಿ.ಜಿ.ಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಗ್ರಾಪಂ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಲಾನಯನ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಗರ್ಭದಲ್ಲಿ ಅಪಾರವಾದ ಖನಿಜ ಸಂಪತ್ತುಗಳಿವೆ. ಇವುಗಳಲ್ಲಿ ಜೀವಜಲ ಅತ್ಯಂತ ಪ್ರಮುಖವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ದುರಾಸೆಯಿಂದ ಮರ, ಗಿಡಗಳ ಮಾರಣ ಹೋಮವಾಗುತ್ತಿದೆ.ಹಾಗಾಗಿ ಜಲ ಸಂಪನ್ಮೂಲ ಪಾತಳಕ್ಕೆ ಇಳಿಯುತ್ತಿದೆ. ಈಗಾಗಲೇ ಸಕಾಲಕ್ಕೆ ಮಳೆ , ಬೆಳೆ ದೊರಕುತ್ತಿಲ್ಲ. ನೆರೆ- ಬರದಂತಹ ಪ್ರಕೃತಿ ವಿಕೋಪಗಳು ಹೆಚ್ಚಾಗಿವೆ. ದುರಂತಗಳನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮನುಕುಲದ ವಿನಾಶ ಖಚಿತ ಎಂದು ಅವರು ಎಚ್ಚರಿಸಿದರು. ಜಲ ಸಂರಕ್ಷಣೆಗಾಗಿ ನಾವು ಪರಿಸರವನ್ನು ಉಳಿಸಬೇಕಿದೆ. ಸರ್ಕಾರಗಳು ಮುಂದಿನ ಪೀಳಿಗೆಯ ಜೀವ ರಕ್ಷಣೆಗಾಗಿ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಇದರ ಮಹತ್ವವನ್ನು ತಿಳಿದುಕೊಂಡು ಪ್ರತಿಯೊಬ್ಬರೂ ತಮ್ಮ ಜಮೀನು ಮತ್ತು ವಾಸಿಸುವ ಸುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ತಮ್ಮ ಕುಟುಂಬದ ಹಿರಿಯರಿಗೆ ಪರಿಸರ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಅನುಕೂಲಗಳ ಬಗ್ಗೆ ಮಾಹಿತಿ: ಮಂಡ್ಯ ವಿಸಿ ಫಾರಂ ಕೃಷಿ ಸಂಶೋಧಕ ಸುನೀಲ್ ಪರಿಸರ ಪಾಲನೆಯಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಜಲಾನಯನ ಯಾತ್ರೆ ಎಂಬ ಜಾಗೃತಿ ಬರಹಗಳಿದ್ದ ಫಲಕಗಳನ್ನು ಹಿಡಿದುಕೊಂಡು ಪರಿಸರ ಪರ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಕೃಷಿ ಇಲಾಖೆ ಉಪ ನಿರ್ದೇಶಕ ಮುನೇಗೌಡ, ತಾಲೂಕು ಸಹಾಯಕ ನಿರ್ದೇಶಕ ದೀಪಕ್, ಕೃಷಿ ಅಧಿಕಾರಿ ರಾಜೇಶ್, ಗ್ರಾಪಂ ಪಿಡಿಒ ಜಯಸ್ವಾಮಿ, ಗ್ರಾಪಂ ಉಪಾಧ್ಯಕ್ಷೆ ಪರಿಮಳಾ, ಸದಸ್ಯ ಮಹದೇವಪ್ಪ, ಸೊಸೈಟಿ ಅಧ್ಯಕ್ಷ ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net