

ಮಳವಳ್ಳಿ: ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಮಾರಮ್ಮ ದೇವಿಯ ಶಿಲಾ ಪ್ರತಿಷ್ಠಾಪನೆ ಮತ್ತು ದೇವಾಲಯ ಸೇವೆಗೆ ಸಮರ್ಪಣೆ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮಾರಮ್ಮ ದೇವಿಯ ಗುಡಿಯನ್ನು ನೆಲಸಮಗೊಳಿಸಿ ಗ್ರಾಮದ ಯಜಮಾನರು ಹಾಗೂ ಮುಖಂಡರ ನೇತೃತ್ವದಲ್ಲಿ ನೂತನ ಸನ್ನಿಧಿ ನಿರ್ಮಾಣ ಮಾಡಲಾಗಿತ್ತು.
ಉದ್ಘಾಟನೆ ಮತ್ತು ಅಮ್ಮನವರ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಸಂಜೆಯಿಂದಲೇ ದೇವಾಲಯದ ಆವರಣದಲ್ಲಿ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿಗಳು, ನವಗ್ರಹ ಮತ್ತು ಇತರೆ ದೇವತೆಗಳ ಪೂಜಾ ಕೈಂಕರ್ಯಗಳು ನಾಗಭೂಷಣ ಆರಾಧ್ಯ ಅವರ ನೇತೃತ್ವದಲ್ಲಿ ನೆರವೇರಿತು. ಶುಕ್ರವಾರ ಬೆಳಗಿನಜಾವ ಶುಭ ಲಗ್ನದಲ್ಲಿ ರಾಜಗೋಪುರದ ಮೇಲೆ ಕಳಶ ಮತ್ತು ಗರ್ಭಗುಡಿಯಲ್ಲಿ ದೇವಿಯ ಶಿಲಾ ಮೂರ್ತಿ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಗ್ರಾಮವೂ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳಿಂದ ಆಗಮಿಸಿದ ಭಕ್ತರು ದೇವಿಗೆ ಪೂಜೆ ಸಲ್ಲಿಸಲು ಸರದಿಯಲ್ಲಿ ನಿಂತಿದ್ದರು. ಗ್ರಾಮದಲ್ಲಿ ಮಂಟೇಸ್ವಾಮಿ ಹಾಗೂ ಮತ್ತಿತಾಳೇಶ್ವರ ಬಸವಗಳ ಮೆರವಣಿಗೆಯೂ ಇದೇ ಸಂದರ್ಭ ಮಂಗಳವಾದ್ಯ ಸಹಿತ ನೆರವೇರಿತು. ದೇವತಾ ಕಾರ್ಯದ ಅಂಗವಾಗಿ ನೆರೆದಿದ್ದ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಗ್ರಾಮದ ಯಜಮಾನರು ಹಾಗೂ ಮುಖಂಡರು ಹಾಜರಿದ್ದರು.