ಮಳವಳ್ಳಿ ಪುರಸಭೆ ಚುಕ್ಕಾಣಿ ಹಿಡಿದ ಪಕ್ಷೇತರರು

4 mlv 2
ಮಳವಳ್ಳಿ ಪುರಸಭೆಗೆ ಅಧ್ಯಕ್ಷರಾಗಿ ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ ಬಸವರಾಜು ಚುನಾಯಿತಾರದ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ಸದಸ್ಯರು ವಿಜಯ ಚಿಹ್ನೆ ತೋರಿ ಸಂಭ್ರಮಿಸಿದರು.
Published on

ಮಳವಳ್ಳಿ: ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್-ಬಿಜೆಪಿ ಸದಸ್ಯರ ಬೆಂಬಲ ಪಡೆದು ಪಕ್ಷೇತರರಾದ ಪುಟ್ಟಸ್ವಾಮಿ ಅಧ್ಯಕ್ಷ, ಬಸವರಾಜು(ಜಯಸಿಂಹ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


23 ಸದಸ್ಯರನ್ನು ಹೊಂದಿರುವ ಪಟ್ಟಣದ ಪುರಸಭೆಗೆ, ಒಂಬತ್ತು ಜೆಡಿಎಸ್, ಐದು ಕಾಂಗ್ರೆಸ್, ಇಬ್ಬರು ಬಿಜೆಪಿ ಹಾಗೂ ಏಳು ಪಕ್ಷೇತರ ಸದಸ್ಯರು ಚುನಾಯಿತರಾಗಿದ್ದು, ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದೆ ಅಧಿಕಾರ ಹಿಡಿಯಲು ಪಕ್ಷೇತರ ಸದಸ್ಯರ ಬೆಂಬಲ ಪಡೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಮೊದಲ ಅವಧಿಯಲ್ಲಿ ಪಕ್ಷೇತರರ ಬೆಂಬಲದಿಂದ ಜೆಡಿಎಸ್ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದರು. ಮೀಸಲಾತಿ ಮರುವಿಂಗಡೆಯಲ್ಲಿ ಪರಿಶಿಷ್ಟ ಜಾತಿಗೆ ಅಧ್ಯಕ್ಷ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ಚುನವಾಣೆ ನಿಗದಿಯಾಗಿತ್ತು.
ಜೆಡಿಎಸ್-ಬಿಜೆಪಿ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪುಟ್ಟಸ್ವಾಮಿ 14 ಮತ ಜಯಗಳಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜಶೇಖರ್ 9 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನ ಸ್ಪರ್ಧಿಸಿದ್ದ ಅಭ್ಯರ್ಥಿ ಬಸವರಾಜು 15 ಮತ ಪಡೆದು ಜಯ ಗಳಿಸಿದರೆ, ಕಾಂಗ್ರೆಸ್‌ನಿಂದ ಕಣದಲ್ಲಿದ್ದ ಶಿವಸ್ವಾಮಿ 8 ಮತ ಪಡೆದು ಪರಾಭವಗೊಂಡರು.


ಜೆಡಿಎಸ್-ಬಿಜೆಪಿ ವಿಜಯೋತ್ಸವ: ಕಳೆದ ಎರಡು ದಿನಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿತರೊಡನೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಪುರಸಭೆ ಸದಸ್ಯರು ಪ್ರತ್ಯೇಕವಾಗಿ ಪ್ರವಾಸಕ್ಕೆ ತೆರಳಿದ್ದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿದ್ದ ವೇಳೆಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಬೆಂಗಾವಲಿನಲ್ಲಿ ಮೈತ್ರಿ ಬೆಂಬಲಿತ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಂದೇ ಸಮಯಕ್ಕೆ ಪ್ರವಾಸಿ ವಾಹನಗಳಲ್ಲಿ ಆಗಮಿಸಿ ಪುರಸಭಾ ಕಾರ್ಯಾಲಯ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು. ಚುನಾವಣಾ ಪ್ರಕ್ರಿಯೆ ನಂತರ ವಿಜೇತರು ಹೊರಬರುತ್ತಿದ್ದಂತೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ- ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ ಜೆಡಿಎಸ್-ಬಿಜೆಪಿ ಹತ್ತಾರು ಮುಖಂಡರು ಇದ್ದರು.

ಗುಂಪಿನಲ್ಲಿ ಕಳ್ಳರ ಕೈ ಚಳಕ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸುವನಾವಣೆ ನಡೆಯುತ್ತಿದ್ದ ವೇಳೆ ಪುರಸಭೆ ಆವರಣದಲ್ಲಿ ಜಮಾಯಿಸಿದ್ದ ಜನರ ಗುಂಪಿನಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರ ಜೇಬು ಕತ್ತರಿಸಿ 40 ಸಾವಿರ ರೂ. ಎಗರಿಸಿದ್ದಾರೆ. ತಾಲೂಕಿನ ಕಂದೇಗಾಲ ಗ್ರಾಮದ ಶಿವಮಾದು ಹಣ ಕಳೆದುಕೊಂಡವರು. ಐವತ್ತಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತಿನ ನಡುವೆಯೇ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net