ರಾಷ್ಟ್ರೀಯ ಹೆದ್ದಾರಿ ನ್ಯೂನತೆ ಸರಿಪಡಿಸಲು ಸಮ್ಮತಿ: ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಹಿತಿ

Mla-P.M.Narendraswamy
Published on

ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ಹಾದು ಹೋಗುವ ಬೆಂಗಳೂರು-ದಿಂಡಿಗಲ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ-209 ಗೆ ಸಂಬಂಧಿಸಿದಂತೆ ನ್ಯೂನತೆಗಳನ್ನು ಹಂತ ಹಂತವಾಗಿ ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮ್ಮತಿ ನೀಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಹದಿನೈದು ವರ್ಷದ ಹಿಂದೆ ನಿರ್ಮಾಣ ಕೈಗೆತ್ತಿಕೊಂಡಿರುವ ಈ ಮಾರ್ಗದ ಯೋಜನಾ ವರದಿಯಿಂದ ಪ್ರಸ್ತುತ ವಾಹನ ದಟ್ಟನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳ ಅಭಿವೃದ್ದಿ ಹಾಗೂ ಜನವಸತಿ ಪ್ರದೇಶಗಳ ಬಳಿ ನಿರ್ಮಾಣವಾಗಬೇಕಿರುವ ರಸ್ತೆಡುಬ್ಬ, ವಿದ್ಯುತ್ ದೀಪ ಆಳವಡಿಕೆ ಮತ್ತು ಕೆಳಸೇತುವೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳ ನಿರ್ಮಾಣಕ್ಕೆ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಅಪಘಾತ ಸೇರಿದಂತೆ ಹಲವು ಸಮಸ್ಯೆ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಪ್ರತಿಭಟನೆ ನಡೆಸಿ ಟೋಲ್ ಸಂಗ್ರಹ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಮುಖ್ಯ ಕಾರ್ಯದರ್ಶಿಗೆ ಬರೆಯಲಾಗಿತ್ತು. ಆ ಪತ್ರದ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಚರ್ಚೆ ನಡೆಸಿ ಹಾಗೂ ಆಗತ್ಯ ಕಾಮಗಾರಿಗಳ ಪಟ್ಟಿಮಾಡಲಾಗಿತ್ತು. ಇದರೊಂದಿಗೆ ಜನರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಕ್ರಮ ವಹಿಸುವಂತೆ ಒತ್ತಡ ಹೇರಲಾಗಿತ್ತು ಎಂದು ವಿವರಿಸಿದರು.

ಇನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯ ಪರಿಣಾಮ ಹೆದ್ದಾರಿ ನಿಯಮಾವಳಿ ಪ್ರಕಾರ ಜಂಕ್ಷನ್ ಅಭಿವೃದ್ದಿ, ಸಿಗ್ನಲ್ ದೀಪ ಮತ್ತು ನಾಮಫಲಕ ಅಳವಡಿಕೆ, ರಸ್ತೆ ಡುಬ್ಬ ಮತ್ತು ಕೆಳ ಸೇತುವೆ ನಿರ್ಮಾಣವನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳುವ ಲಿಖಿತ ಭರವಸೆ ನೀಡಿದೆ. ಅಂತೆಯೇ ಕೇಂದ್ರ ಸರ್ಕಾರದ ಯೋಜನೆಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಸಹಮತ ವ್ಯಕ್ತಪಡಿಸಲಾಗಿದೆ ಎಂದ ಅವರು, ಭವಿಷ್ಯದಲ್ಲಿ ಎದುರಾಗುವ ಸಂಚಾರ ದಟ್ಟಣೆ ನಿಯಂತ್ರಿಸಲು ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವ ಸಂಬಂಧ ಹೊಸದಾಗಿ ಕ್ರಿಯಾ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಗಳಿಂದ ವ್ಯಕ್ತವಾಗಿತ್ತು. ಈ ಕಾರಣದಿಂದ ರಸ್ತೆ ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹಕ್ಕೆ ಹಾಕಿದ್ದ ಷರತ್ತನ್ನು ಸಡಿಲಿಸಲಾಗಿದೆ. ಮುಖ್ಯವಾಗಿ ಸುಂಕ ವಸೂಲಾತಿ ನಿಲ್ದಾಣಕ್ಕೆ ‘ಸತ್ತೇಗಾಲ ಪ್ರೀ ಪ್ಲಾಜಾ’ ಎಂಬ ಹೆಸರನ್ನು ನಾಮಕರಣಗೊಳಿಸಲಾಗಿತ್ತು. ಈಗ ಅದನ್ನು ಬದಲಿಸಿ ಐತಿಹಾಸಿಕ ಪ್ರವಾಸಿ ತಾಣ ‘ಗಗನಚುಕ್ಕಿ ಪ್ರೀ ಪ್ಲಾಜಾ’ ಎಂದು ಬದಲಾಯಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net