

ಚಳ್ಳಕೆರೆ: ಮೃತ್ಯುಕೂಪ ಎನಿಸುವ ಮಲೇರಿಯಾ ರೋಗವು ಅನಾಫೀಲಿಸ್ ಎನ್ನುವ ಹೆಣ್ಣು ಸೊಳ್ಳೆಯಿಂದ ಮನುಷ್ಯರಿಗೆ ಹರಡುತ್ತದೆ ಎಂದು ವೈದ್ಯಾಧಿಕಾರಿ ಡಾ.ಎಚ್.ಸಿ.ಗುರುಪ್ರಸಾದ್ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸೊಳ್ಳೆ ದಿನಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲೇರಿಯಾ ರೋಗ ಸೊಳ್ಳೆಯಿಂದ ಹರಡುವ ಬಗ್ಗೆ 1897ರಲ್ಲಿ ರೊನಾಲ್ಡ್ ರೋಲ್ಸ್ ಎಂಬ ಜೀವ ವಿಜ್ಞಾನಿ ಜಾಗೃತಿ ಮೂಡಿಸಿದ್ದಾರೆ. ಆತನ ನೆನಪಿಗಾಗಿ ವಿಶ್ವ ಸೊಳ್ಳೆಗಳ ದಿನ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸೊಳ್ಳೆಗಳು ಇತರ ಪ್ರಾಣಿ ಮತ್ತು ವಿಷಜಂತುಗಳಿಗಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತವೆ. ಸೊಳ್ಳೆಗಳ ಜೀವನ ಚಕ್ರವು ಸಾರ್ವತ್ರಿಕವಾಗಿ ಬೆಳೆಯುವ ಮಾದರಿಯಲ್ಲಿ ಮೊಟ್ಟೆ, ಲಾರ್ವ, ಪ್ಯೂಪ ಮತ್ತು ಪ್ರೌಢ ಸೊಳ್ಳೆ ಎನ್ನುವ ಹಂತಗಳಲ್ಲಿ ಸಂತತಿ ನೀರಿನಲ್ಲಿ ಬೆಳೆಯುತ್ತದೆ. ವಿಶ್ವದ ಅಂಟಾರ್ಟಿಕ್ ಪ್ರದೇಶ ಹೊರತುಪಡಿಸಿ ಜಗತ್ತಿನ ಎಲ್ಲ ಭೌಗೋಳಿಕ ನೆಲೆಯಲ್ಲಿ 3500 ವಿಧದ ಸೊಳ್ಳೆಗಳ ಪ್ರಬೇಧ ಸಂತತಿ ಇದೆ. 2020ರಲ್ಲಿ ಸೊಳ್ಳೆಬಾಧಿತ ರೋಗದಿಂದ 6 ಲಕ್ಷ ಜೀವ ಹಾನಿಯಾಗಿದೆ ಎಂದು ತಿಳಿಸಿದರು.
ಮಲೇರಿಯಾ ರೋಗದಿಂದ ಗುಣಮುಖವಾಗಬಹುದು. ಆದರೆ, ಎಚ್ಚರ ತಪ್ಪಿದರೆ ಅಪಾಯ ತಪ್ಪದು ಎಂದು ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎನ್.ನವೀನ್‌ಕುಮಾರ್, ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳಾದ ರೇಣುಕಮ್ಮ, ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸ್ನೇಹಾ, ಕರಿಯಣ್ಣ, ಬಿ.ಚಾಂದ್, ಪಾರ್ಮಸಿ ಶಂಕರ್ ಇದ್ದರು.