ಮಿಷನ್ ಮಲೇರಿಯಾ ನಿರ್ಮೂಲನೆ

masquito-Web
Published on

ವೇಣುವಿನೋದ್ ಕೆ.ಎಸ್ ಮಂಗಳೂರು 

ಒಂದೆರಡು ವರ್ಷಗಳಿಂದ ಇಳಿಮುಖವಾಗುತ್ತಾ ಸಾಗಿ ಎರಡಂಕಿ ತಲುಪಿರುವ ಮಲೇರಿಯಾವನ್ನು ಮಂಗಳೂರಿನಿಂದ ಪೂರ್ತಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಾರ್ಯಕ್ರಮ ಹಾಕಿಕೊಂಡಿದೆ.

ಮಲೇರಿಯಾದ ರಾಜಧಾನಿ ಎಂಬ ಅಪಖ್ಯಾತಿ ಪಡೆದಿದ್ದ ಮಂಗಳೂರು ಐದಾರು ವರ್ಷಗಳಿಂದ ಮಲೇರಿಯಾದ ಮೇಲೆ ನಿಯಂತ್ರಣ ಹೇರುವಲ್ಲಿ ಯಶಸ್ವಿಯಾಗಿದ್ದು, ಆ ಬಳಿಕ ವರ್ಷದಿಂದ ವರ್ಷಕ್ಕೆ ಮಲೇರಿಯಾ ಸಂಖ್ಯೆ ಇಳಿಮುಖವಾಗಿದೆ.

2015ರ ಜನವರಿಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ 1068 ಇದ್ದುದು, 2018ರಲ್ಲಿ 342ಕ್ಕೆ ಇಳಿಕೆಯಾಗಿದೆ. 2020ರಲ್ಲಿ ಇದು 145 ಇದ್ದುದು ಈ ವರ್ಷ ಇನ್ನಷ್ಟು ಇಳಿಕೆ ಕಂಡು 76ಕ್ಕೆ ಬಂದಿದೆ. ಇದೇ ಇಸವಿಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಮಲೇರಿಯಾ ಸಂಖ್ಯೆ ಅನುಕ್ರಮವಾಗಿ 662, 182, 87 ಹಾಗೂ 53 ಆಗಿದ್ದರೆ ಮಾರ್ಚ್ ತಿಂಗಳಲ್ಲಿ 400, 180, 54 ಹಾಗೂ 26 ಆಗಿತ್ತು.

ಮಲೇರಿಯಾ ನಿಯಂತ್ರಣಕ್ಕೆಂದು ಜಾರಿಗೆ ತಂದಿರುವ ಸಾಫ್ಟ್‌ವೇರ್‌ನಿಂದಾಗಿ ಪ್ರಾರಂಭದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದ್ದು(ಎಲ್ಲ ಲ್ಯಾಬ್‌ಗಳಿಂದ ವರದಿ ಬರಲಾರಂಭಿಸಿದ ಕಾರಣ) ಇನ್ನೊಂದೆಡೆ ನಿಯಂತ್ರಣ ಕಾರ್ಯಕ್ರಮಗಳಿಂದಾಗಿ ಪ್ರಸ್ತುತ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ.
ಒಂದೆಡೆ ಎಲ್ಲ ಲ್ಯಾಬ್‌ಗಳು, ಆಸ್ಪತ್ರೆಗಳಿಂದ ಮಲೇರಿಯಾ ಪೀಡಿತರ ದತ್ತಾಂಶ ಪಡೆದು, ಅದನ್ನು ಮಲೇರಿಯಾ ತಂತ್ರಾಂಶ ಮೂಲಕ ಮನಪಾ ಆರೋಗ್ಯ ವಿಭಾಗಕ್ಕೆ ಕಳಿಸುತ್ತವೆ. ಬಳಿಕ ಆಡಳಿತ ಆಯಾ ಪ್ರದೇಶಕ್ಕೆ ಅಲ್ಲಿನ ಎಂಪಿಡಬ್ಲೂೃಗಳನ್ನು ಕಳುಹಿಸುವುದು ಅವರಿಂದ ಸ್ಥಳೀಯವಾಗಿ ಲಾರ್ವ ನಿರ್ಮೂಲನ, ಸ್ಥಳೀಯ ಜನರ ಕಾಂಟಾಕ್ಟ್ ಸ್ಮಿಯರ್ ಟೆಸ್ಟ್ ಮಾಡುವುದು, 14 ದಿನಗಳ ಬಳಿಕ ಮತ್ತೆ ಭೇಟಿ ನೀಡಿ ಮಲೇರಿಯಾ ಪೀಡಿತರು ಗುಣಮುಖರಾಗಿರುವುದನ್ನು ಖಚಿತಪಡಿಸಿ ಫೈಲ್ ಕ್ಲೋಸ್ ಮಾಡುವುದು ವ್ಯವಸ್ಥೆ.

ಒಂದೆರಡು ದಿನದಲ್ಲೇ ಸಮಿತಿ ಸಭೆ: ಕೆಲವು ವರ್ಷಗಳಿಂದ ಮಲೇರಿಯಾ ನಿಯಂತ್ರಣ ಸಮಿತಿಯ ಸಭೆ ಕೂಡಾ ನಡೆದಿಲ್ಲ. ಅದನ್ನು ಮತ್ತೆ ನಡೆಸುವುದು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನಗರವನ್ನು ಮಲೇರಿಯಾ ಮುಕ್ತ ಮಾಡುವುದಕ್ಕೆ ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ‘ವಿಜಯವಾಣಿಗೆ’ ತಿಳಿಸಿದರು. ಮಂಗಳೂರಿನಲ್ಲಿ ಈಗಾಗಲೇ ಮಲೇರಿಯಾ ಸಾಕಷ್ಟು ಕಡಿಮೆ ಆಗಿದೆ. ಅದನ್ನು ಪೂರ್ಣ ನಿರ್ಮೂಲನೆ ಮಾಡಿ ಶೂನ್ಯದರಕ್ಕೆ ತಂದು ನಿಲ್ಲಿಸುವ ಗುರಿ ನಮ್ಮ ಮುಂದಿದೆ. ಅದಕ್ಕಾಗಿ ಅನೇಕ ವೈದ್ಯರು ನಮಗೆ ಸಲಹೆ ನೀಡಿದ್ದಾರೆ. ಅಲ್ಲದೆ ಆ ಬಗ್ಗೆ ನಿರಂತರ ಚರ್ಚೆ ಮಾಡುವುದಕ್ಕಾಗಿ ಸಭೆ ಹಮ್ಮಿಕೊಂಡಿದ್ದೇವೆ. ಸಾಧ್ಯವಾದರೆ ಮಾ.30ರಂದು ಅಥವಾ ಮುಂದಿನ ಒಂದೆರಡು ದಿನಗಳಲ್ಲೇ ಸಮಿತಿ ಸಭೆ ಹಮ್ಮಿಕೊಂಡು ಯೋಜನೆಯನ್ನು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಈಗ ವಾರ್ಡ್‌ಗೆ ಒಂದರಂತೆ 60 ಬಹೂಪಯೋಗಿ ಕೆಲಸಗಾರರು(ಎಂಪಿಡಬ್ಲೂೃ) ಇದ್ದಾರೆ, ಮಲೇರಿಯಾ ಕುರಿತ ಕೆಲಸ ಮಾಡುವುದಕ್ಕೆ ಅವರಿಗೆ ಹೆಚ್ಚಾಗಿ ಒತ್ತಡ ಇರುತ್ತದೆ. ಇತರ ಕೆಲಸಗಳೂ ಇರುತ್ತವೆ. ಹಾಗಾಗಿ ಹೆಚ್ಚುವರಿಯಾಗಿ ಪಾಲಿಕೆಯಿಂದ 60 ಎಂಪಿಡಬ್ಲೂೃ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಆಗ ಸರ್ವೇಗಳು, ಫೀಲ್ಡ್ ವರ್ಕ್ ಅಲ್ಲದೆ ಮಳೆಗಾಲದಲ್ಲಿ ಲಾರ್ವ ಸಮೀಕ್ಷೆ, ಕಟ್ಟಡಗಳ ಪರಿಶೀಲನೆ ಇತ್ಯಾದಿಗೂ ಬಳಸಿಕೊಳ್ಳಬಹುದು.
ಪ್ರೇಮಾನಂದ ಶೆಟ್ಟಿ ಮನಪಾ, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net