

ಬೆಳಗಾವಿ: ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ಅವಧಿಯನ್ನು 2025ರವರೆಗೂ ವಿಸ್ತರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಗಳ ಮಹಾಸಂಘ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
2024ರ ಸೆ. 20ರಂದು ಕಾರ್ಖಾನೆ ಸರ್ವ ಸದಸ್ಯರು ಹಾಗೂ ರೈತ ಸಂಘಗಳ ಒಕ್ಕೂಟದಿಂದ ಅಹೋರಾತ್ರಿ ಧರಣಿ ಮಾಡಲಾಗಿತ್ತು. ಆ ವೇಳೆ ವಾರ್ಷಿಕ ಮಹಾಸಭೆಯಲ್ಲಿ ತನಿಖೆ ಮಾಡಿಸುವ ಠರಾವ್ ಮಾಡಿದ್ದರು. ಈ ಹಿನ್ನೆಲೆ ದೂರು ಅರ್ಜಿಗಳನ್ನು ದಾಖಲಿಸಿಕೊಂಡ ಅಧಿಕಾರಿಗಳಿಗೆ 2018ರಿಂದ 2023ರವರೆಗಿನ ವ್ಯವಹಾರದ ತನಿಖೆ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇದರಲ್ಲಿ 2024-25ನೇ ವರ್ಷ ಕೈ ಬಿಟ್ಟಿದ್ದು ಸರಿಯಲ್ಲ. ಎಲ್ಲ ಅವಧಿಯ ತನಿಖೆಯೂ ಆಗಬೇಕಿತ್ತು. ತನಿಖಾ ವ್ಯಾಪ್ತಿಯನ್ನು 2023ರಿಂದ 2025ರವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಶೀಘ್ರ ತನಿಖಾ ಅವಧಿ ವಿಸ್ತರಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಬೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಬಸನಗೌಡ ಪಾಟೀಲ, ಸಣ್ಣಗೌಡ ಪಾಟೀಲ, ಸುರೇಶ ವಾಲಿ ಇತರರಿದ್ದರು.