

ಹಟ್ಟಿಹೊಳಿ ಪೆನಲ್‌ಗೆ ಅಭೂತಪೂರ್ವ ಗೆಲುವು
ಪ್ರತಿಷ್ಠೆಯ ಕಣವಾಗಿದ್ದ ಚುನಾವಣೆ
15 ಸ್ಥಾನಗಳೆಲ್ಲ ಪುನಶ್ಚೇತನ ಬಣಕ್ಕೆ
ಎಂ.ಕೆ.ಹುಬ್ಬಳ್ಳಿ(ಬೆಳಗಾವಿ): ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್ ಅಭೂತಪೂರ್ವ ಗೆಲುವು ಸಾಧಿಸಿದೆ.
ಭಾನುವಾರ ನಡೆದ ಮತದಾನದಲ್ಲಿ ಶೇ.49.45 ಶಾಂತಿಯುತವಾಗಿ ಮತದಾನವಾಗಿತ್ತು. ಸಂಜೆ 5.30ಕ್ಕೆ ಮತದಾನ ಪೂರ್ಣಗೊಂಡಿತ್ತು. 15 ನಿರ್ದೇಶಕ ಸ್ಥಾನಗಳಿಗೆ ಒಟ್ಟು 44 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. 34 ಮತಗಟ್ಟೆಗಳ 16,903 ಮತದಾರರಲ್ಲಿ 8,359 ರೈತರು ಮತಾಧಿಕಾರ ಚಲಾಯಿಸಿದ್ದಾರೆ. ತಡರಾತ್ರಿವರೆಗೂ ಮತ ಎಣಿಕೆ ನಡೆದಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಫಲಿಂತಾಶಕ್ಕಾಗಿ ಮತಕೇಂದ್ರದ ಎದುರು ಕಾರಿನಲ್ಲಿ ಕಾಯ್ದು ಕುಳಿತಿರುವುದು ಕಂಡುಬಂದಿತು.
ಯಾರಿಗೆ ಎಷ್ಟು ಮತ:
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ರೈತರ ಪೆನಲ್ ನಡಿ ಸಾಮಾನ್ಯ ಮತಕ್ಷೇತ್ರದಿಂದ ಸ್ಫರ್ಧಿಸಿದ್ದ ಚನ್ನರಾಜ ಬಸವರಾಜ ಹಟ್ಟಿಹೊಳಿ(4731), ಶ್ರೀಕಾಂತ ನಾಗಪ್ಪ ಇಟಗಿ(4424), ಶಿವನಗೌಡ ದೊಡಗೌಡ ಪಾಟೀಲ(4349), ಶಂಕರ ಪರಪ್ಪ ಕಿಲ್ಲೇದಾರ(4245), ಶ್ರೀಶೈಲ ಬಸಪ್ಪಾ ತುರಮರಿ(4183), ಶಿವಪುತ್ರಪ್ಪ ಬಸವಣ್ಣೆಪ್ಪ ಮರಡಿ(3838), ರಘು ಚಂದ್ರಶೇಖರ ಪಾಟೀಲ(3829), ರಾಮನಗೌಡ ಸಣಗೌಡ ಪಾಟೀಲ(3735), ಸುರೇಶ ಯಲ್ಲಪ್ಪಾ ಹುಲಿಕಟ್ಟಿ(3668), ಪ್ರವರ್ಗ-ಅ ಮತಕ್ಷೇತ್ರದಿಂದ ಫಕ್ಕೀರಪ್ಪ ಫಕ್ಕೀರಪ್ಪ ಸಕ್ರೆಣ್ಣವರ(4142), ಪ್ರವರ್ಗ-ಬ ಮತಕ್ಷೇತ್ರದಿಂದ ಶಂಕರೆಪ್ಪ ಸದೆಪ್ಪ ಹೊಳಿ(4507), ಮಹಿಳಾ ಮತಕ್ಷೇತ್ರದಿಂದ ಲಲಿತಾ ಭಾಲಚಂದ್ರ ಪಾಟೀಲ(4041), ಸುನಿತಾ ಮಹಾಂತೇಶ ಲಂಗೋಟಿ(3913), ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ಬಾಳಪ್ಪ ದುರಗಪ್ಪ ಪೂಜಾರ(3827) ಹಾಗೂ ಪರಿಶಿಷ್ಟ ಪಂಗಡ ಮತಕ್ಷೇತ್ರದಿಂದ ಭರಮಪ್ಪ ಕಲ್ಲಪ್ಪ ಶಿಗೆಹಳ್ಳಿ (4161) ಮತಗಳನ್ನು ಪಡೆದು ಜಯಶಾಲಿಗಳಾಗಿ ಆಯ್ಕೆಯಾಗಿದ್ದಾರೆ.
ಎಲ್ಲ 15 ನಿರ್ದೇಶಕ ಸ್ಥಾನಗಳು ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಪುನಶ್ಚೇತನ ಪೆನಲ್ ಗೆ ಒಲಿದವು.
ತಡರಾತ್ರಿ ಹೊತ್ತಿಗೆ ಫಲಿತಾಂಶ ಹೊರಬಿತ್ತು. ಸಚಿವೆ ಹೆಬ್ಬಾಳ್ಕರ್ ಸಹೋದರ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅಭ್ಯರ್ಥಿಯಾಗಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್ ನೇತತ್ವ ವಹಿಸಿಕೊಂಡಿದ್ದರಿಂದ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್ ಕಾರ್ಖಾನೆ ಚುನಾವಣಾ ಕಣ ಪ್ರವೇಶಿಸಿದ್ದರಿಂದ ಪ್ರತಿಷ್ಠೆಯಾಗಿ ಪರಿಣಮಿಸಿತ್ತು.
ಕಾರ್ಖಾನೆ ಮಾಜಿ ಅಧ್ಯಕ್ಷ ನಾಸಿರ್ ಬಾಗವಾನರ ರೈತರ ಹಾಗೂ ಕಾರ್ಮಿಕರ ಹಿತರಕ್ಷಣಾ ಪೆನಲ್ ಮತ್ತು ರೈತಸಂಘದ ಮುಖಂಡ ಬಸವರಾಜ ಮೋಕಾಶಿ ನೇತತ್ವದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವದ್ಧಿ ಪೆನಲ್ ಸ್ಪರ್ಧೆಗಿಳಿದಿದ್ದರಿಂದ ಚುನಾವಣೆ ಪೈಪೋಟಿಯಿಂದ ಕೂಡಿತ್ತು. ಚುನಾವಣಾಧಿಕಾರಿಯಾಗಿ ಪ್ರಭಾವತಿ ಫಕೀರಪುರ ಕರ್ತವ್ಯ ನಿರ್ವಹಿಸಿದರು.
ಮತ ಚಲಾಯಿಸಿದ ಸಚಿವೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ತಾಯಿ ಹಾಗೂ ಸ್ಪರ್ಧಿಗಳಾದ ಚನ್ನರಾಜ ಹಟ್ಟಿಹೊಳಿ, ನಾಸಿರ್ ಬಾಗವಾನ್, ಬಸವರಾಜ ಮೋಕಾಶಿ ಮತಚಲಾಯಿಸಿದ ಪ್ರಮುಖರು.
ಹೆಚ್ಚಾದ ಮತದಾನ: ಕಾರ್ಖಾನೆ ಗುರುತಿನ ಚೀಟಿ ಜತೆಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಕಲ್ಪಿಸಿದ್ದರಿಂದ ಈ ಸಲ ಮತದಾನಕ್ಕೆ ಮತ್ತಷ್ಟು ಅನುಕೂಲವಾಯಿತು. ಕಾರ್ಖಾನೆ ಅಧಿಕಾರಿಗಳು ಸಿಬ್ಬಂದಿ ಮೂಲಕ ಗುರುತಿನ ಚೀಟಿ ಮರೆತು ಬಂದ ಮತದಾರರಿಗೆ ಷೇರು ಸಂಖ್ಯೆ ಹುಡುಕಿಕೊಡಲು ನೆರವಾದರು. ಅಂಗವಿಕಲರು, ವೃದ್ಧರನ್ನು ಮತದಾನಕ್ಕೆ ಕರೆತಂದಿದ್ದು ವಿಶೇಷವಾಗಿತ್ತು. ಶುಕ್ರವಾರ ಮತ್ತು ಶನಿವಾರ ಎಡಬಿಡದೆ ಸುರಿದ ಮಳೆ ಭಾನುವಾರ ವಿರಾಮ
ನೀಡಿದ್ದರಿಂದ ಮತದಾನ ಸುಸೂತ್ರವಾಗಿ ನಡೆಯಿತು. ವೈದ್ಯಕೀಯ ಸೇವೆ, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿ ಎಲ್ಲ ಸಿದ್ಧತೆ ಮಾಡಲಾಗಿತ್ತು.