ಅಪಾಯದ ಮಟ್ಟಮೀರಿ ಹರಿದ ಮಲಪ್ರಭಾ ನದಿ, ಬೆಣ್ಣೆಹಳ್ಳ-ಕೊಳ್ಳಗಳು

NRD RAIN
Published on

ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದೆ. ಗುರುವಾರ ಬೆಳಗ್ಗೆಯಿಂದಲೂ ಆಗಾಗ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಮಲಪ್ರಭಾ ನದಿ, ಬೆಣ್ಣೆಹಳ್ಳ-ಕೊಳ್ಳಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಕೆಲ ಗ್ರಾಮದ ಮನೆಗಳಿಗೆ ಬೆಣ್ಣೆಹಳ್ಳದ ನೀರು ನುಗ್ಗಿದ್ದರಿಂದ ಜನ-ಜೀವನ ಅಸ್ತವ್ಯಸ್ತಗೊಂಡಿದ್ದು, ವಿವಿಧ ರಸ್ತೆ, ಸಾರಿಗೆ ಸಂಪರ್ಕ ಕಡಿತಗೊಂಡಿವೆ.

ತಾಲೂಕಿನ ಕುರ್ಲಗೇರಿ, ಸುರಕೋಡ, ಹದ್ಲಿ, ಗಂಗಾಪೂರ, ಖಾನಾಪೂರ ಗ್ರಾಮದ ಬಳಿಯ ಬೆಣ್ಣೆಹಳ್ಳ ಸಂಪೂರ್ಣ ತುಂಬಿ ಹರಿಯುತ್ತಿದೆ. ಬೆಣ್ಣೆಹಳ್ಳದ ಪ್ರವಾಹಕ್ಕೆ ತಾಲೂಕಿನ ಸುರಕೋಡ ಸಂಪೂರ್ಣ ನಡುಗಡೆಯಂತಾಗಿದ್ದು, ಗ್ರಾಮಸ್ಥರಿಗೆ ಆತಂಕ ಎದುರಾಗಿದೆ. ಕುರ್ಲಗೇರಿ ಗ್ರಾಮದ 10ಕ್ಕೂ ಹೆಚ್ಚು ಮನೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದೆ. ಭೈರನಹಟ್ಟಿ ಗ್ರಾಮದ 30ಕ್ಕೂ ಅಧಿಕ ಹರಣಶಿಕಾರಿ ಕುಟುಂಬಸ್ಥರ ಮನೆಗಳಿಗೆ ಚರಂಡಿ ಹಾಗೂ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8 ಕೊಠಡಿಗಳ ಪೈಕಿ 7 ಕೊಠಡಿಗಳಲ್ಲಿದ್ದ ನಲಿ-ಕಲಿಯ ವಿವಿಧ ಪಠ್ಯ-ಪುಸ್ತಕಗಳು ಹಾನಿಗೀಡಾಗಿವೆ. ಬೆಣ್ಣೆಹಳ್ಳದ ಪ್ರವಾಹದಿಂದ ನರಗುಂದದಿಂದ ಕುರ್ಲಗೇರಿ ಮಾರ್ಗವಾಗಿ ಸಂಚರಿಸುವ ಗದಗ, ಮದಗುಣಕಿ ಮಾರ್ಗವಾಗಿ ಸಂಚರಿಸುವ ರೋಣ, ಹದ್ಲಿ ಮತ್ತು ಗಂಗಾಪೂರ ಮಾರ್ಗವಾಗಿ ಸಂಚರಿಸಬೇಕಿದ್ದ ಶಿರೋಳ-ಹೊಳೆಆಲೂರ ಮುಂತಾದ ರಸ್ತೆ ಸಂಪರ್ಕ ಮಾರ್ಗಗಳು ಕಡಿತಗೊಂಡಿವೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಪಂ ಸಿಇಒ ಭರತ್ ಎಸ್, ತಹಸೀಲ್ದಾರ್ ಶ್ರೀ ಶೈಲ ತಳವಾರ, ತಾಪಂ ಆಡಳಿತಾಧಿಕಾರಿ ಎಚ್.ಬಿ. ಹುಲಗನ್ನವರ, ನರಗುಂದ ತಾಪಂ ಇಒ ಎಸ್.ಕೆ. ಇನಾಂದಾರ, ಕಂದಾಯ ನೀರಿಕ್ಷಕರಾದ ಎಸ್.ಎಲ್. ಪಾಟೀಲ, ಐ.ವೈ. ಕಳಸಣ್ಣವರ, ಗ್ರಾಮಾಡಳಿತ ಅಧಿಕಾರಿ ಶೃತಿ ಭಜಂತ್ರಿ, ಪಿಎಸ್​ಐ ಎಫ್.ಎಸ್. ಮಣ್ಣೂರ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹವಾಮಾನ ಇಲಾಖೆಯಿಂದ ಗದಗ ಜಿಲ್ಲೆಯನ್ನು ರೆಡ್ ಅಲರ್ಟ್ ಘೊಷಿಸಲಾಗಿದೆ. ನಿರಂತರ ಮಳೆ ಮುಂದುವರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುವುದು ಮುನ್ಸೂಚನೆಗಳು ಕಂಡು ಬಂದಲ್ಲಿ ತಾಲೂಕಾಡಳಿತದಿಂದ ಪ್ರವಾಹಕ್ಕೆ ತುತ್ತಾಗುವ ವಿವಿಧ ಗ್ರಾಮಗಳ ಜನ-ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಲೂಕಾಡಳಿತಕ್ಕೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net