

ಎಂ.ಕೆ.ಹುಬ್ಬಳ್ಳಿ: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಎಂ.ಕೆ.ಹುಬ್ಬಳ್ಳಿ ಬಳಿ ಇರುವ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಮಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ನಿರಂತರ ಮಳೆಯಿಂದ ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನದಿ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ, ಈ ವರ್ಷ ಜೂನ್ ಆರಂಭದಲ್ಲೇ ಉತ್ತಮ ಮಳೆ ಸುರಿಯುತ್ತಿದ್ದರಿಂದ ಮಲಪ್ರಭಾ ನದಿಯ ಮಧ್ಯೆ ಇರುವ ಶರಣೆ ಗಂಗಾಂಬಿಕಾ ಐಕ್ಯ ಮಂಟಪ ಆಕರ್ಷಣೆಯಿಂದ ಗೋಚರಿಸುತ್ತಿದೆ. ಈಗಾಗಲೇ ರೈತರು ಬಿತ್ತನೆ ಕಾರ್ಯ ಮುಗಿಸಿದ್ದಾರೆ.