

ಚನ್ನಮ್ಮನ ಕಿತ್ತೂರು: ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೀರೇಶ ಹುಲಿಕಟ್ಟಿ ಮೇಲೆ ಕೋಟ್ಯಂತರ ರೂ. ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಸೆ.25ರಂದು ನಡೆಯುವ ವಾರ್ಷಿಕ ಸಭೆಯಲ್ಲಿ ರೈತ ಸದಸ್ಯರ ಒಪ್ಪಿಗೆ ಪಡೆದು ಸೂಕ್ತ ತನಿಖೆಗೆ ಆದೇಶಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಹೇಳಿದರು.
ಪಟ್ಟಣದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಮಾಜಿ ಎಂ.ಡಿ. ವೀರೇಶ ಹುಲಿಕಟ್ಟಿ ತಮಗೆ ಬೇಕಾದವರನ್ನು ನೇಮಿಸಿಕೊಂಡು ಅವ್ಯವಹಾರ ನಡೆಸಿದ ಆರೋಪವನ್ನು ರೈತರು ಹಾಗೂ ನಿರ್ದೇಶಕ ಮಂಡಳಿ ಮಾಡಿದೆ. ಹಣ ಲೂಟಿ ಮಾಡಿದ್ದು ನಿಜವಾದರೆ ವಸೂಲಿ ಮಾಡಿ ಕಾರ್ಖಾನೆಗೆ ತುಂಬಿಸಬೇಕು ಹಾಗೂ ಸೂಕ್ತ ಕ್ರಮ ಜರುಗಿಸಬೇಕೆಂದು ನಿರ್ದೇಶಕ ಮಂಡಳಿ ನಿರ್ಧಾರ ಕೈಗೊಂಡಿದೆ. ಮಲಪ್ರಭಾ ಬೆಳಕು ಸೊಸೈಟಿ ಹುಟ್ಟುಹಾಕಿ ಕೆಲ ಕಾರ್ಮಿಕರ ಹೆಸರಿನಲ್ಲಿ ಅವರಿಗೆ ತಿಳಿಯದಂತೆ ಸೊಸೈಟಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಒಂದೇ ದಿನ ಹೂಡಿಕೆ ಮಾಡಿ, ಹಿಂಪಡೆದಿರುವ ಮಾಹಿತಿಯಿದೆ ಎಂದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕನಾದ ನಂತರ ನಾನು ಲೆಕ್ಕಪತ್ರ ಪರಿಶೀಲಿಸುವಾಗ ಈ ಪ್ರಕರಣ ಗಮನಕ್ಕೆ ಬಂದಿದೆ. ರೈತರಿಗೆ 52 ಕೋಟಿ ರೂ. ಬಾಕಿ ಹಣ ನೀಡಬೇಕಾದರೆ ಗೋದಾಮಿನಲ್ಲಿ ಎಷ್ಟು ಸಕ್ಕರೆ ಜಮೆ ಇದೆ ಎಂದು ಸಂಬಂಧಪಟ್ಟವರನ್ನು ವಿಚಾರಿಸಿದಾಗ ತಪ್ಪು ನಡೆದಿರುವ ಸಂಶಯ ಬಂದಿದೆ. ಅವ್ಯವಹಾರಕ್ಕೂ ಮೊದಲೇ ಕಾರ್ಮಿಕರಿಗೆ ತಿಳಿಯದಂತೆ ಸಹಿ ಮಾಡಿಸಿಕೊಂಡು ಹಣ ಡ್ರಾ ಮಾಡಿಕೊಂಡಿದ್ದಾರೆ. ಇದು ಸಕ್ಕರೆಯ ಹಣ ಇರಬಹುದೆಂಬ ಸಂಶಯ ಬಂದಿದ್ದು, ತನಿಖೆಗೆ ಮಹಾಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಖಾನೆಯ ನಿರ್ದೇಶಕ ಸಾವಂತ ಕಿರಬಣ್ಣವರ ಮಾತನಾಡಿದರು. ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷೆ ಲಕ್ಷ್ಮೀ ಅರಳಿಕಟ್ಟಿ, ನಿರ್ದೇಶಕರಾದ ಸಂಜೀವ ಹುಬ್ಬಳ್ಳಿ, ಲಕ್ಷ್ಮಣ ಎಮ್ಮಿ, ಮೀನಾಕ್ಷಿ ನೆಲಗಳಿ, ಶಂಕರಗೌಡ ಪಾಟೀಲ, ಜ್ಯೋತಿಬಾ ಹೈಬತ್ತಿ, ಬಸವರಾಜ ಬೆಂಡಿಗೇರಿ, ಸಿದ್ದಪ್ಪ ದೂರಪ್ಪನವರ, ಮಂಜುನಾಥ ಪಾಟೀಲ, ಅಶೋಕ ಬೆಂಡಿಗೇರಿ, ಬಸವರಾಜ ಪುಂಡಿ, ಭರತೇಶ ಶೆಬ್ಬಣ್ಣವರ ಇತರರು ಇದ್ದರು.