

ವಿಜಯವಾಣಿ ಸುದ್ದಿಜಾಲ ಗುರುಪುರ
ಮಂಗಳೂರು ತಾಲೂಕಿನ ಮಳಲಿ ಮಟ್ಟಿಯ ಜೋಗಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಆ.30ರಂದು ಜೀರ್ಣೋದ್ಧಾರ ಕಾರ್ಯಗಳಿಗೆ ಶಿಲಾನ್ಯಾಸ ಹಾಗೂ ಮುಂದಿನ ಫೆಬ್ರವರಿ 21ರಂದು ಅಷ್ಟಬಂಧ ಪುನಃ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ.
ದೇವಸ್ಥಾನದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಕದ್ರಿ ಜೋಗಿ ಮಠದ ಶ್ರೀ ವಿಠಲದಾಸ್ ತಂತ್ರಿ ಮಾತನಾಡಿ, ದೇವರ ಸಾನ್ನಿಧ್ಯ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಸುವ ಪ್ರತೀತಿ ಇದೆ. ದೇವರ ಅಪೇಕ್ಷೆ ಎಂಬಂತೆ ಇಂಥ ಪುಣ್ಯದ ಕಾರ್ಯಗಳು ನಡೆಯುತ್ತವೆ. ಈ ಬಾರಿ ಇಲ್ಲಿ ದೇವರ ಸಾನ್ನಿಧ್ಯದ ಜತೆಗೆ ದೈವಗಳ ಸಾನ್ನಿಧ್ಯ, ಕೆರೆ ಅಭಿವೃದ್ಧಿಗೊಳ್ಳಲಿದೆ. ಅಂದಾಜು 1.5 ಕೋಟಿ ರೂ. ವೆಚ್ಚವಾಗಲಿದ್ದು, ಊರವರು ಸಹಕಾರ ನೀಡಬೇಕು ಎಂದು ಹೇಳಿದರು.
ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಮಾತನಾಡಿ, ದೇವಸ್ಥಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಿಗೆ ಊರವರ ಸಹಕಾರ ಅಗತ್ಯ. ದೇವ-ದೈವಗಳ ಪುಣ್ಯದ ಕೆಲಸದಲ್ಲಿ ಎಲ್ಲರೂ ಕೈಜೋಡಿಸುವ ವಿಶ್ವಾಸವಿದೆ ಎಂದರು.
ಧಾರ್ಮಿಕ ಮುಂದಾಳು ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಜೀರ್ಣೋದ್ಧಾರ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಬಗ್ಗೆ ಮಾಹಿತಿ ನೀಡಿದರು. ಬಳಿಕ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು.
ಕದ್ರಿ ಜೋಗಿ ಮಠದ ಪ್ರಧಾನ ಅರ್ಚಕ ಉಮೇಶ್‌ನಾಥ್ ಕದ್ರಿ, ಗೌರವ ಸಲಹೆಗಾರ ಶೇಖರ ಜೋಗಿ, ವಿಶ್ವನಾಥ ಪೂಜಾರಿ, ಶಿಕ್ಷಕ ಜಯಂತ ಆಚಾರ್ಯ, ಕೇಶವ ಪೂಜಾರಿ ಮೆಸ್ಕಾಂ, ಮಾರಪ್ಪ ಶೆಟ್ಟಿ, ಶಿಕ್ಷಕ ಜಯಕರ ಶೆಟ್ಟಿ, ಭರತ್ ಕರ್ಕೇರ, ಅರ್ಚಕ ಯೋಗೀಶ್, ಹರೀಶ್ ಮಟ್ಟಿ, ದಿನೇಶ್ ಶೆಟ್ಟಿ, ಮೋಹನ್ ಜೋಗಿ, ನಾಗೇಶ್ ಜೋಗಿ, ಸುನೀಲ್ ಪೂಜಾರಿ ಗಂಜಿಮಠ, ಬೂಬ ಪೂಜಾರಿ, ವಿನಯ್ ಪೂಜಾರಿ ಮಟ್ಟಿ ಮೇಗಿನಮನೆ, ದಯಾನಂದ ಪೂಜಾರಿ, ದಿವಾಕರ, ವಿದ್ಯಾ ಜೋಗಿ, ಲಕ್ಷ್ಮೀಕಾಂತ, ಗಂಗಾಧರ ಜೋಗಿ, ಅಜಯ್ ಜೋಗಿ, ಮಮತಾ ಕುಂದರ್, ಹರೀಶ್ ಜೋಗಿ, ದೀಕ್ಷಿತ್ ರೈ ಮಳಲಿ, ನಿಧಿ ಮಳಲಿ, ದೇವಸ್ಥಾನ ವ್ಯಾಪ್ತಿಯ ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಸ್ಥರು ಮತ್ತಿತರರು ಪಾಲ್ಗೊಂಡಿದ್ದರು.
ಜೀರ್ಣೋದ್ಧಾರ ಸಮಿತಿಗೆ ಶೇಖರ ಜೋಗಿ ಅಧ್ಯಕ್ಷ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಶೇಖರ ಜೋಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಶಾಸಕರಾದ ಡಾ.ಭರತ್ ಶೆಟ್ಟಿ, ರಾಜೇಶ್ ನಾಕ್ ಮತ್ತು ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಗಂಗಾಧರ ಜೋಗಿ, ಗಣನಾಥ ಭಂಡಾರಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ನಾರಳ, ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ದೀಕ್ಷಿತ್ ರೈ ಮಳಲಿ, ಸಲಹೆಗಾರರು, ಮಹಿಳಾ ಸಮಿತಿ ಹಾಗೂ ಮೊಗರು, ತೆಂಕುಳಿಪಾಡಿ ಮತ್ತು ಬಡಗುಳಿಪಾಡಿ ಗ್ರಾಮಗಳ ಪ್ರಮುಖರನ್ನೊಳಗೊಂಡ ಇತರ ಸಮಿತಿ ರಚಿಸಲಾಯಿತು.