ಮಳಲಿ-ಪೊಳಲಿ ನರ್ಮ್ ಬಸ್ ಸೇವೆಗೆ ಸಂಕಷ್ಟ: 7 ವರ್ಷಗಳ ಬಳಿಕ ಈಡೇರಿದ ಬೇಡಿಕೆಗೂ ಬಂದಿದೆ ಕುತ್ತು

bus
ಮಳಲಿ- ಪೊಳಲಿ ಮಾರ್ಗವಾಗಿ ಸಂಚರಿಸುತ್ತಿರುವ ನರ್ಮ್ ಬಸ್.
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಮಂಗಳೂರಿನಿಂದ ಮಳಲಿ ಮಾರ್ಗವಾಗಿ ಪೊಳಲಿಗೆ ಆರಂಭಗೊಂಡಿರುವ ಸರ್ಕಾರಿ ನರ್ಮ್ ಬಸ್ ಸೇವೆಗೆ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಿದ್ದರೂ ಖಾಸಗಿ ಬಸ್ ವಲಯದಿಂದ ವಿನಾ ಕಾರಣ ಅಸಹಕಾರ ವ್ಯಕ್ತವಾಗಿರುವ ಬಗ್ಗೆ ಸ್ಥಳೀಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸುಮಾರು 7 ವರ್ಷಗಳಿಂದ ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ಮಳಲಿ ಗ್ರಾಮೀಣ ಪ್ರದೇಶಕ್ಕೆ ಸರ್ಕಾರಿ ಬಸ್ ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಾ ಬಂದಿದ್ದು, ಸ್ಥಳೀಯರು ಆರ್‌ಟಿಒ, ಮಂಗಳೂರಿನ ಪುರಭವನದಲ್ಲಿ ನಡೆದಿದ್ದ ಜನತಾ ದರ್ಶನ ಮತ್ತು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊನೆಗೂ ಕಳೆದ ಏಪ್ರಿಲ್‌ನಲ್ಲಿ ಮಂಗಳೂರಿನಿಂದ ಗುರುಪುರ ಕೈಕಂಬ ಜಂಕ್ಷನ್, ಅರ್ಬಿ, ನಾಡಜೆ, ಜೋಡುತಡಮೆ, ಮಳಲಿ, ಕಾಜಿಲ, ಅಡ್ಡೂರು ಮಾರ್ಗವಾಗಿ ಪೊಳಲಿ ದೇವಸ್ಥಾನಕ್ಕೆ ಸರ್ಕಾರಿ ಬಸ್ ಸೇವೆ ಆರಂಭಗೊಂಡಿತ್ತು.

ದಿನಕ್ಕೆ ನಾಲ್ಕು ಟ್ರಿಪ್ ಹೊಡೆಯುತ್ತಿರುವ ಈ ಬಸ್ ಸೇವೆ ಗ್ರಾಮೀಣ ಭಾಗದ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ಮಹಿಳೆಯರಿಗೆ ಉಪಯುಕ್ತವೆನಿಸಿದೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿಗೆ ಕಿಕ್ಕಿರಿದು ತುಂಬಿರುವ ಖಾಸಗಿ ಬಸ್‌ಗಳಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ ತಪ್ಪಿದ್ದು, ಸರ್ಕಾರಿ ನರ್ಮ್ ಬಸ್ ಸೇವೆ ಹೆಚ್ಚು ಆರಾಮದಾಯಕವಾಗಿದೆ ಎಂಬುದು ಈ ಭಾಗದ ಪ್ರಯಾಣಿಕರ ಮಾತು.

ಇತ್ತೀಚಿನ ಕೆಲವು ದಿನಗಳಿಂದ ಸರ್ಕಾರಿ ಬಸ್‌ಗೆ ಕೈಕಂಬ ಜಂಕ್ಷನ್ ಮತ್ತು ಪೊಳಲಿಯಲ್ಲಿ ಖಾಸಗಿ ಬಸ್ ವಲಯದಿಂದ ತೀವ್ರ ಕಿರಿಕಿರಿ ಉಂಟಾಗಿದೆ. ಬಸ್ ಟೈಮಿಂಗ್ ಬಗ್ಗೆ ವಿನಾ ಕಾರಣ ತಗಾದೆ ತೆಗೆಯುತ್ತಿದ್ದಾರೆ. ನರ್ಮ್ ಬಸ್ ನಿಗದಿತ ಸಮಯಕ್ಕೆ ನಿರ್ದಿಷ್ಟ ಬಸ್ ಸ್ಟಾೃಂಡ್‌ಗೆ ಬರುತ್ತಿದ್ದರೂ ‘ಅದು ನಮ್ಮ ಟೈಮ್, ಇದು ನಿಮ್ಮ ಟೈಮ್’ ಎಂದು ರೇಗಾಡುತ್ತ ಸರ್ಕಾರಿ ಬಸ್ ಸೇವೆಗೆ ಅಡ್ಡಿಯುಂಟು ಮಾಡುವುದಲ್ಲದೆ ಪ್ರಯಾಣಿಕರಿಗೂ ಭೀತಿಯುಂಟು ಮಾಡುವ ಮೂಲಕ ಅಸಹಕಾರ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿಬಂದಿವೆ.

ಮಳಲಿ ಗ್ರಾಮೀಣ ಪ್ರದೇಶದಲ್ಲಿ ಒಂದು ಖಾಸಗಿ ಬಸ್ ಆರಂಭಿಸುವಂತೆ ಕೆಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ನಮ್ಮ ಮನವಿಗೆ ಯಾರೂ ಸ್ಪಂದಿಸಿಲ್ಲ. ಸಾರ್ವಜನಿಕರು ಸರ್ಕಾರಕ್ಕೆ ಮನವಿ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮಳಲಿ ಮಾರ್ಗವಾಗಿ ಪೊಳಲಿಗೆ ನರ್ಮ್ ಬಸ್ ಸೇವೆ ಆರಂಭಗೊಂಡಿದೆ. ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವಾಗಿರುವ ಈ ಬಸ್ ಸೇವೆಗೆ ಈಗ ಖಾಸಗಿ ಬಸ್‌ನವರು ಅಡ್ಡಿ ಉಂಟು ಮಾಡುತ್ತಿರುವುದು ಬೇಸರದ ಸಂಗತಿ. ಇದನ್ನು ನಾವು ಸಹಿಸುವುದಿಲ್ಲ.- ಬೂಬ ಪೂಜಾರಿ, ಮಳಲಿ ನಿವಾಸಿ ಗ್ರಾಮೀಣ ಭಾಗದ ಮಳಲಿ, ಕಾಜಿಲ, ಅಡ್ಡೂರು ಮೂಲಕ ಪೊಳಲಿಗೆ ಸರ್ಕಾರಿ ಬಸ್ ಸೇವೆ ಆರಂಭಗೊಂಡಾಗ ಎಲ್ಲರಿಗೂ ಸಂತೋಷವಾಗಿತ್ತು. ಆದರೆ ಗ್ರಾಮೀಣರ ಈ ಸಂತೋಷಕ್ಕೆ ಖಾಸಗಿ ಬಸ್‌ನವರು ಅಡ್ಡಿಯಾಗುತ್ತಿದ್ದಾರೆ. ನಿಧಾನಗತಿಯಲ್ಲಿ ಸಾಗಿದರೂ ಖಾಸಗಿಗಿಂತ ಸರ್ಕಾರಿ ಬಸ್ ಎಲ್ಲ ರೀತಿಯಿಂದಲೂ ಪ್ರಯೋಜನಕಾರಿ. ಖಾಸಗಿಯವರ ಅಸಹಕಾರ ಸರಿಯಲ್ಲ.- ಹನೀಫ್, ಕಾಜಿಲದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net