

ಬೆಂಗಳೂರು: ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅಸಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿರುವ ಮಂಗಳೂರು ಸಿವಿಲ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಮಂಗಳೂರಿನ ತೆಂಕ ಉಳೇಪಾಡಿ ಗ್ರಾಮದ ಧನಂಜಯ್ ಹಾಗೂ ಬಡಗ ಉಳೇಪಾಡಿ ಗ್ರಾಮದ ಮನೋಜ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಪೀಠ ಶುಕ್ರವಾರ ಪ್ರಕಟಿಸಿದ್ದು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಜೂ.13ರಂದು ನೀಡಿದ್ದ ಮಧ್ಯಂತರ ಆದೇಶವೂ ತೆರವುಗೊಂಡಂತಾಗಿದೆ.
ಪ್ರಕರಣವೇನು?: ಮಳಲಿ ಮಸೀದಿ ನವೀಕರಣ ಕಾಮಗಾರಿ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸುವಂತೆ ಕೋರಿ ಧನಂಜಯ್ ಹಾಗೂ ಮನೋಜ್ ಕುಮಾರ್ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಈ ಮಧ್ಯೆ ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆ ಅಡಿಯಲ್ಲಿ ಅಸಲು ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಸ್ಥಳ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವ ಕುರಿತು ವಿಚಾರಣೆ ಕೈಗೆತ್ತಿಕೊಂಡಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ-ಪ್ರತಿವಾದ: ಅಸಲು ದಾವೆಯ ವಿಚಾರಣಾ ಮಾನ್ಯತೆ ನಿರ್ಧರಿಸುವ ಮೊದಲು ಸ್ಥಳ ಪರಿಶೀಲನೆ ನಡೆಸಲು ಕೋರ್ಟ್ ಕಮಿಷನರ್ ನೇಮಕ ಮಾಡಬೇಕೆಂಬ ಮನವಿ ಪರಿಗಣಿಸಬೇಕು. ಸ್ಥಳ ಪರಿಶೀಲನೆ ನಡೆದು ಮಾಹಿತಿಗಳನ್ನು ವೈಜ್ಞಾನಿಕವಾಗಿ ಪಡೆದುಕೊಂಡರೆ ಮಾತ್ರ ಕಟ್ಟಡದ ಇತಿಹಾಸ ಮತ್ತು ಪುರಾತನತೆ ಗೊತ್ತಾಗುತ್ತದೆ. ಅಸಲು ದಾವೆ ಮತ್ತು ಸ್ಥಳ ಪರಿಶೀಲನೆ ವಿಚಾರ ಬಂದಾಗ ಮೊದಲು ಅಸಲು ದಾವೆ ಅರ್ಜಿಗೆ ಮನ್ನಣೆ ಕೊಡಬೇಕೋ ಅಥವಾ ಸ್ಥಳ ಪರಿಶೀಲನೆಗೆ ಮಾನ್ಯತೆ ನೀಡಬೇಕೋ ಎಂದು ಕಾನೂನಿನಲ್ಲಿ ನಿರ್ದಿಷ್ಠವಾಗಿ ಹೇಳಲಾಗಿಲ್ಲ. ವೈಜ್ಞಾನಿಕ ವರದಿಯಿಂದ ಇದಕ್ಕೆ ಉತ್ತರ ಸಿಗಲಿದೆ. ಇಲ್ಲಿ ಜ್ಞಾನವಾಪಿ ಮಸೀದಿ ಪ್ರಕರಣ ಅನ್ವಯವಾಗುತ್ತದೆ. ಈ ಅಂಶಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು.
ಅಸಲು ದಾವೆಯನ್ನು ಆಲಿಸಲು ವಿಚಾರಣಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ನಿರ್ಧಾರವಾಗುವ ಮೊದಲು ಕಮಿಷನರ್ ವರದಿ ಅಗತ್ಯವಿಲ್ಲ. ಒಂದು ವೇಳೆ, ಮೊದಲು ಕಮಿಷನರ್ ನೇಮಿಸಿ, ವರದಿ ಬಂದ ನಂತರ ದಾವೆಯ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಬಂದರೆ, ಕಮಿಷನರ್ ನೇಮಕ ಮತ್ತವರ ವರದಿ ಎರಡಕ್ಕೂ ಮಾನ್ಯತೆ ಇರುವುದಿಲ್ಲ. ಆದ್ದರಿಂದ, ಮೊದಲು ಅಸಲು ದಾವೆಯ ಸಿಂಧುತ್ವದ ಬಗ್ಗೆ ನಿರ್ಧಾರವಾಗಬೇಕಿದೆ ಎಂದು ಮಸೀದಿ ಆಡಳಿತ ಮಂಡಳಿಯ ಪರ ವಕೀಲರು ವಾದ ಮಂಡಿಸಿದ್ದರು.