

ಮಂಗಳೂರು: ಗುರುಪುರ ಬಳಿಯ ಮಳಲಿ ಜುಮ್ಮಾ ಮಸೀದಿ ಹಿಂದಿನ ಕಾಲದಲ್ಲಿ ದೇವಸ್ಥಾನ ಆಗಿತ್ತೇ ಎನ್ನುವ ಬಗ್ಗೆ ಹಿಂದು ಸಂಘಟನೆಗಳು ತಾಂಬೂಲ ಪ್ರಶ್ನೆ ನಡೆಸುತ್ತಿದ್ದು, ಕೇರಳದ ಖ್ಯಾತ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ಜ್ಯೋತಿಷ್ಯ ಚಿಂತನೆ ಆರಂಭಗೊಂಡಿದೆ.
ಸ್ಥಳೀಯ ಉಳಿಪ್ಪಾಡಿ ಗುತ್ತಿನ ಉದಯ ಕುಮಾರ್ ಶೆಟ್ಟಿ ತಾಂಬೂಲ ಪ್ರಶ್ನೆಯ ಯಜಮಾನಿಕೆ ವಹಿಸಿಕೊಂಡಿದ್ದು ಜ್ಯೋತಿಷಿಗಳಿಗೆ 9 ವೀಳ್ಯದೆಲೆಗಳನ್ನು ನೀಡಿ ತಾಂಬೂಲ ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜ್ಯೋತಿಷಿ, ಈ ತಾಂಬೂಲಕ್ಕೆ ಗುರುಬಲ ಇದೆ. ಸದ್ರಿ ಜಾಗ ಮೇಲ್ನೋಟಕ್ಕೆ ದೇವಸ್ಥಾನ ಇದ್ದ ಭೂಮಿ ಎನ್ನುವುದು ತಿಳಿದು ಬರುತ್ತಿದೆ. ಯಾವ ದೇವ ಸಾನ್ನಿಧ್ಯ ಎಂದು ತಿಳಿಯಬೇಕಿದೆ.
ಜ್ಯೋತಿಷಿಗಳು, ಸಾಮಾನ್ಯ ತಾಂಬೂಲ ಪ್ರಶ್ನೆ ಮೂಲಕ ಯಾವ ದೈವ ಸಾನ್ನಿಧ್ಯ ಅಂತ ಹೇಳಲು ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನ ಇತ್ತೇ ಅಥವಾ ದೈವಸ್ಥಾನ ಇತ್ತೇ ಎನ್ನುವ ಬಗ್ಗೆ ಮುಂದೆ ಚಿಂತನೆ ನಡೆಸಬೇಕಿದೆ. ಈ ಜಾಗದಲ್ಲಿ ಹಿಂದೆ ಮಠ, ಆರಾಧನೆ ಇದ್ದಿರುವ ಬಗ್ಗೆ ಕಂಡುಬರುತ್ತಿದೆ. ಅದು ದೈವಸಾನ್ನಿಧ್ಯ ಇದ್ದ ಭೂಮಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಾನ್ನಿಧ್ಯ ಸಂಪೂರ್ಣವಾಗಿ ನಾಶ ಆಗಿಲ್ಲ. ಪೂರ್ವ ಕಾಲದಲ್ಲಿ ಮಠದ ರೀತಿಯ ಪ್ರದೇಶ ಆಗಿತ್ತು. ಮಠ ನಾಶ ಆಗಲು ಜೀವ ಹಾನಿಯಾಗಿರೋದು ಕಾರಣವಾಗಿರಬಹುದು. ದೋಷಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಜ್ಯೋತಿಷ್ಯ ಚಿಂತನೆ ನಡೆಸಿದ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದರು.
ಹಿಂದೂ ಸಂಘಟನೆ ಮುಖಂಡರುಗಳಾದ ಶರಣ್ ಪಂಪುವೆಲ್, ಶಿವಾನಂದ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.