24ರಿಂದ ಮಳಲಿ ದೇವಳ ಜಾತ್ರಾ ಮಹೋತ್ಸವ

Published on

ಗುರುಪುರ: ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಮಳಲಿ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ (ಜೋಗಿಮಠ)ದಲ್ಲಿ ಫೆ.24ರಿಂದ 27ರವರೆಗೆ ಜಾತ್ರಾ ಮಹೋತ್ಸವ, ಮಹಾಶಿವರಾತ್ರಿ ಉತ್ಸವ ಜರುಗಲಿದೆ.

ಕದ್ರಿ ಜೋಗಿಮಠದ ಶ್ರೀ ಯೋಗಿರಾಜ ನಿರ್ಮಲನಾಥ ಮಹಾರಾಜ್ ಆಶೀರ್ವಚನ ನೀಡಿ, ಶ್ರೀ ಕ್ಷೇತ್ರ ಕದ್ರಿಯ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ, ದೇವಸ್ಥಾನ ಅಧ್ಯಕ್ಷ, ಪ್ರಧಾನ ಅರ್ಚಕ ಉಮೇಶನಾಥ ಕದ್ರಿ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿವಿಧಾನ ನಡೆಯಲಿವೆ.

ಫೆ.24ರಂದು ಬೆಳಗ್ಗೆ 9.30ಕ್ಕೆ ಶತರುದ್ರಾಭಿಷೇಕ, ಮಹಾರುದ್ರಯಾಗ, ಮಧ್ಯಾಹ್ನ 1.30ರಿಂದ ಮಳಲಿ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಅವರಿಂದ ‘ದಕ್ಷಯಜ್ಞ’ ಯಕ್ಷಗಾನ ತಾಳಮದ್ದಳೆ, ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ಮಕ್ಕಳ ಭಜನಾ ಮಂಡಳಿ, ಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿಯಿಂದ ಭಜನೆ, ರಾತ್ರಿ 7ರಿಂದ ರಂಗಪೂಜೆ, ಮಹಾಪೂಜೆ, ಉತ್ಸವಬಲಿ, ಬಟ್ಟಲು ಕಾಣಿಕೆ ನಡೆಯಲಿದೆ.

25ರಂದು ಬೆಳಗ್ಗೆ 8ರಿಂದ ಮಹಿಷಂದಾಯ, ಧೂಮಾವತಿ ಬಂಟ, ಅಣ್ಣಪ್ಪ ಪಂಜುರ್ಲಿ, ಮಲರಾಯ ಬಂಟ ದೈವಗಳ ಭಂಡಾರ ಏರಲಿದೆ. ರಾತ್ರಿ 8ರಿಂದ ಮಹಿಷಂದಾಯ ದೈವದ ನೇಮ, 9ಕ್ಕೆ ಮಲರಾಯ ಬಂಟ ದೈವಗಳ ನೇಮ, ರಾತ್ರಿ 12.30ರಿಂದ ಧೂಮಾವತಿ ಬಂಟ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. 26ರಂದು ಬೆಳಗ್ಗೆ 6.30ರಿಂದ ಮಹಾಶಿವರಾತ್ರಿ ಪ್ರಯುಕ್ತ ಏಕಾಹ ಭಜನಾ ಸೇವೆ ಜರುಗಲಿದೆ. 27ರಂದು ಬೆಳಗ್ಗೆ 5ರಿಂದ ಮಟ್ಟಿ ಭಜನಾ ಮಂಡಳಿ ಅವರಿಂದ ಭಜನಾ ಸೇವೆ, ರಾತ್ರಿ 8.30ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲಬಲಿ ಸೇವೆ, ರಾತ್ರಿ 11ರಿಂದ ಗುಳಿಗ ದೈವದ ಗಗ್ಗರಸೇವೆ ಜರುಗಲಿದೆ. ಜಾತ್ರೆ ಪ್ರತಿ ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮೊಕ್ತೇಸರ ಕೆ.ಗಂಗಾಧರ ಮಟ್ಟಿ ಅವರ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net