ಮಲಹಾನಿಕರೇಶ್ವರ ಸ್ವಾಮಿ ರಥೋತ್ಸವ 28ಕ್ಕೆ

24sri-1
Published on

ಶೃಂಗೇರಿ: ಪುರಾಣ ಪ್ರಸಿದ್ಧ ಈಶ್ವರಗಿರಿ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿ ಮಹಾರಥೋತ್ಸವ 28ರಂದು ಜರುಗಲಿದೆ. ಮಹಾಶಿವರಾತ್ರಿ ಹಾಗೂ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ಶ್ರೀಮಠದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

24ರಂದು ಬೆಳಗ್ಗೆ ರಥೋತ್ಸವಾಂಗ ಹೋಮಗಳು, ಜಪ,ಪಾರಾಯಣಗಳು, ಸಂಜೆ 6 ಗಂಟೆಗೆ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿಗೆ ರಾಜಬೀದಿ ಉತ್ಸವ, ಶ್ರೀ ಮಠದ ಪ್ರವಚನ ಮಂದಿರದಲ್ಲಿ ಶ್ರೀಸ್ವಾಮಿಯ ಡೋಲೋತ್ಸವ ಜರುಗಲಿದೆ.

25ರ ಬೆಳಗ್ಗೆ 7ಗಂಟೆಗೆ ಮಹಾಶಿವರಾತ್ರಿ ಪ್ರಯುಕ್ತ ಶ್ರೀಮಠದ ಶ್ರೀನರಸಿಂಹಭಾರತೀ ಯಾಗ ಮಂಟಪದಲ್ಲಿ ಮಹಾರುದ್ರ ಪುರಶ್ಚರಣೆ, 10 ಗಂಟೆಗೆ ಶ್ರೀ ವಿದ್ಯಾಶಂಕರೇಶ್ವರ ಸ್ವಾಮಿ ಉತ್ಸವದಲ್ಲಿ ಈಶ್ವರಗಿರಿಗೆ ಪೂಜೆ, ಸಂಜೆ 5ಗಂಟೆಗೆ ಪ್ರದೋಷ ಪೂಜೆ, 6.30ಕ್ಕೆ ಬೀದಿ ಉತ್ಸವದ ನಂತರ ಪ್ರವಚನಮಂದಿರದಲ್ಲಿ ಡೋಲೋತ್ಸವ ನಡೆಯಲಿದೆ.

26ರಂದು ಬೆಳಗ್ಗೆ 7ಗಂಟೆಗೆ ಶ್ರೀ ಶಂಕರಭಗವತ್ಪಾದಾಚಾರ್ಯರ ಸನ್ನಿಧಿಯಲ್ಲಿ ಶತ ರುದ್ರಾಭಿಷೇಕ, ಮಹಾರುದ್ರ ಪುರಶ್ಚರಣೆ ಬಳಿಕ ಜಗದ್ಗುರುಗಳಿಂದ ಶ್ರೀ ಭವಾನೀ ಮಲಹಾನೀಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಸಂಜೆ 7.30ರಿಂದ ಶ್ರೀಸ್ವಾಮಿಗೆ ನಾಲ್ಕು ಯಾಮ ಪೂಜೆ, ಗುರುನಿವಾಸದಲ್ಲಿ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ನಾಲ್ಕು ಯಾಮದ ವಿಶೇಷ ಪೂಜೆ ನಡೆಯಲಿದೆ.

27ರ ಬೆಳಗ್ಗೆ ಜಪ, ಪಾರಾಯಣಾದಿಗಳು, ಮಹಾರುದ್ರ ಪುರಶ್ಚರಣೆ, ಸಂಜೆ ಬೀದಿ ಉತ್ಸವ, ಡೋಲೋತ್ಸವ ನೆರವೇರಲಿದೆ. 28ರಂದು ಬೆಳಗ್ಗೆ 8ಗಂಟೆಗೆ ಶ್ರೀ ೀಮಲಹಾನಿಕರೇಶ್ವರ ಸ್ವಾಮಿಗೆ ಲಕ್ಷ ಮಲ್ಲಿಕಾರ್ಚನೆ ಬಳಿಕ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಹಾನೀರಾಜನ, ಪ್ರಾರ್ಥನೆ, ರಥಾರೋಹಣ ಹಾಗೂ ಸಂಜೆ 6ಗಂಟೆಗೆ ಮಹಾರಥೋತ್ಸವ ನಡೆಯಲಿದೆ.

ಮಾರ್ಚ್ 1ರಂದು ಓಕುಳಿ ಉತ್ಸವ, ತುಂಗಾ ನದಿಯಲ್ಲಿ ಅವಭೃಥ ಸ್ನಾನ, ಮಹಾರುದ್ರಯಾಗದ ಪೂರ್ಣಾಹುತಿ, ಸಂಜೆ 6.30ಕ್ಕೆ ಶಾರದಾಂಬಾ ದೇವಾಲಯದಲ್ಲಿ ಸಂಧಾನೋತ್ಸವ, ರಾತ್ರಿ 8ಗಂಟೆಗೆ ತೆಪ್ಪೋತ್ಸವ, ಧ್ವಜಾರೋಹಣ, ಪ್ರಸಾದ ವಿನಿಯೋಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net