

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಅದಿ ದೇವತೆ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಮಾ.11ರಿಂದ ಮಾ.19ರ ವರೆಗೆ ಅದ್ದೂರಿಯಾಗಿ ನಡೆಯಲಿದೆ.
ಪ್ರತಿ ಮೂರು ವರ್ಷಕ್ಕೂಮ್ಮೆ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದ್ದು, ತಾಲೂಕಿನಲ್ಲಿ ಎರಡನೇ ಅತಿ ದೊಡ್ಡ ಜಾತ್ರೆ ಇದಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಗ್ರಾಮದಾದ್ಯಂತ ಕೇಸರಿ ಬಣ್ಣದ ಬಂಟಿಂಗ್ ಅಳವಡಿಸಲಾಗಿದೆ.
ದೇವಸ್ಥಾನದ ಬಾಗಿಲು ಬಳಿ ರಥೋತ್ಸವಕ್ಕೆ ರಥದ ಸಿದ್ಧತೆ ಮಾಡಲಾಗಿದ್ದು, ಜಾತ್ರೆ ಸ್ಥಳದಲ್ಲಿ ದೇವಿಯ ಪ್ರತಿಷ್ಠಾಪನೆಗೆ ಸುಂದರವಾದ ಚೌತಮನೆ(ಮಂಟಪ) ನಿರ್ಮಿಸಲಾಗಿದೆ. ಮಾ.11ರಿಂದ ವಿವಿಧ ಕಲಾ ತಂಡಗಳಿಂದ ರಾತ್ರಿ 9.30ರಿಂದ 1ಗಂಟೆಯ ವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.
11ರಂದು ದೇವಿಯ ಪ್ರತಿಷ್ಠಾಪನೆ, ರಾತ್ರಿ 11.08ರಿಂದ 11.54ರ ವರೆಗೆ ರಾಜೋಪಚಾರಾದಿ ವಿನಿಯೋಗಗಳು ನಡೆಯಲಿವೆ. 12ರಂದು ಬೆಳಗ್ಗೆ 9.30ಕ್ಕೆ ರಥೋತ್ಸವ ನಡೆಯುವುದು. ಮಧ್ಯಾಹ್ನ 2ರ ನಂತರ ಜಾತ್ರಾ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುವುದು. ಮಾ.12ರಿಂದ 19ರವರೆಗೆ ಬೆಳಗ್ಗೆ 8.30ರಿಂದ ರಾತ್ರಿ 9ರ ವರೆಗೆ ಹಣ್ಣು,ಕಾಯಿ, ಹರಕೆ, ತುಲಾಭಾರ ಸೇವೆ ನಡೆಯಲಿವೆ. 19ರಂದು ಜಾತ್ರೆ ಸಂಪನ್ನಗೊಳ್ಳಲಿದೆ. ಯುಗಾದಿ ದಿನ ದೇವಸ್ಥಾನದಲ್ಲಿ ದೇವಿಯನ್ನು ಮರು ಪ್ರತಿಷ್ಠಾಪಿಸಲಾಗುವುದು. ರಥೋತ್ಸವವ ವೇಳೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ.