ಮಳಗಿ ಮಾರಿಕಾಂಬಾ ದೇವಿ ಜಾತ್ರೆ ಆರಂಭ

MND Jatre
Published on

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ಮಾರಿಕಾಂಬಾದೇವಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಅದ್ಧೂರಿಯಾಗಿ ಜರುಗಿತು.

ಮಾ. 19ರವರೆಗೆ ಮಾರಿಕಾಂಬಾದೇವಿ ಜಾತ್ರೆ ನಡೆಯಲಿದೆ. ಮಂಗಳವಾರ ರಾತ್ರಿ ಗರ್ಭಗುಡಿ ಹೊರಗಿನ ಗದ್ದುಗೆಯ ಮೇಲೆ ದೇವಿ ಪ್ರತಿಷ್ಠೆ ಹಾಗೂ ಪೂಜೆ ನಂತರ ದೇವಿಯ ಮಾಂಗಲ್ಯಧಾರಣೆ ಕಾರ್ಯಕ್ರಮ ನಡೆಸಲಾಯಿತು. ಬುಧವಾರ ಬೆಳಗ್ಗೆ 9ಕ್ಕೆ ದೇವಿಯನ್ನು ಅಲಂಕೃತ ರಥದಲ್ಲಿ ಜಾತ್ರಾ ಗದ್ದುಗೆಗೆ ತಂದು ಮಧ್ಯಾಹ್ನ 2ಗಂಟೆಯ ನಂತರ ಪ್ರತಿಷ್ಠಾಪಿಸಲಾಯಿತು. ಗದ್ದುಗೆಯ ಬಳಿ ಸುಂದರವಾದ ಜಾತ್ರಾ ಮಂಟಪ ನಿರ್ಮಿಸಲಾಗಿದೆ. ರಥಬೀದಿಯನ್ನು ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು.

ತಾಲೂಕಿನಲ್ಲಿ ನಡೆಯುವ ಜಾತ್ರೆಗಳಲ್ಲಿ ಮಳಗಿ ಗ್ರಾಮದ ಮಾರಿಕಾಂಬಾ ಜಾತ್ರೆ ಎರಡನೇ ಅತಿದೊಡ್ಡ ಜಾತ್ರೆಯಾಗಿದೆ. ಮೂರು ವರ್ಷಕ್ಕೊಮ್ಮೆ ಒಂಬತ್ತುದಿನಗಳ ಕಾಲ ಅದ್ಧೂರಿಯಾಗಿ ಮಹೋತ್ಸವ ಜರುಗುತ್ತದೆ.

ಮಳಗಿ ಹಾಗೂ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಂದ ಸಹಸ್ರಾರು ಜನರು ಆಗಮಿಸಿ ದೇವಿಯ ದರ್ಶನ ಪಡೆದರು.

ರಥೋತ್ಸವ ವೇಳೆ ಭಕ್ತರು ರಥಕ್ಕೆ ಬಾಳೆ ಹಣ್ಣು ಉತ್ತತ್ತಿಯನ್ನು ತೂರಿದರು. ದೇವಿಗೆ ಹರಕೆ ಹೊತ್ತ ಕೆಲವು ಭಕ್ತರು ರಥದ ಕಡೆ ಕೋಳಿಗಳನ್ನು ತೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net