ಸಂತ ಸೇವಾಲಾಲರ ಜನ್ಮಸ್ಥಳದತ್ತ ಸಾಲು ಸಾಲು ಭಕ್ತರು

13 HNL 2
Published on

ಹೊನ್ನಾಳಿ: ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆಯುವ ಸಂತ ಸೇವಾಲಾಲರ ಜಯಂತ್ಯುತ್ಸವಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂಜಾರ ಸಮುದಾಯದ ಲಕ್ಷಾಂತರ ಮಾಲಾಧಾರಿ ಭಕ್ತರು ಪಾದಯಾತ್ರೆ ಹೊರಟಿದ್ದಾರೆ.

ಬುಧವಾರ ಪದಯಾತ್ರಿಗಳು ಹೊನ್ನಾಳಿ ಮಾರ್ಗವಾಗಿ ಸಾಗಿದರು. ಮಾರ್ಗ ಮಧ್ಯದಲ್ಲಿ ಅನೇಕರು ಪಾದಯಾತ್ರಿಗಳಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಸೇವೆ ಬೀದರ್​ನಿಂದ ಹೊನ್ನಾಳಿಯವರೆಗೂ ನಡೆಯುತ್ತಿದೆ. ಸುಮಾರು 2ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ.

ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ರಾಜಸ್ಥಾನ, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರಿಗಾಗಿ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

ಮಾಲಾಧಾರಿಗಳು ಸೇವಾಲಾಲ್, ಮರಿಯಮ್ಮಗೆ ಜಯಘೊಷ ಕೂಗುತ್ತ ನೂರಾರು ಕಿಮೀ ದೂರದಿಂದ ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ಗ್ರಾಮಗಳಲ್ಲಿ ಪೂಜೆ, ಭಜನೆ ಮಾಡಿದ ನಂತರ ಪ್ರಸಾದ ತೆಗೆದುಕೊಂಡು ಮುಂದಕ್ಕೆ ಸಾಗುತ್ತಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಯಿಂದ ಉದ್ಘಾಟನೆ: ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ ಪ್ರತಿ ವರ್ಷ ಅವರ ಜಯಂತಿ ಆಚರಿಸಲಾಗುತ್ತದೆ ಎಂದು ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ನಿರ್ದೇಶಕ ರಾಘವೇಂದ್ರ ನಾಯ್ಕ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವಕ್ಕೆ ನಾಡಿನ ವಿವಿಧೆಡೆಯಿಂದ ಮಾಲಾಧಾರಿಗಳು ಪಾದಯಾತ್ರೆಯ ಮೂಲಕ ಆಗಮಿಸುತ್ತಾರೆ. ಲಂಬಾಣಿ ಜಾನಪದ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳು ಬರಲಿವೆ. ಕವಿಗೋಷ್ಠಿ, ಪುಸ್ತಕ ಬಿಡುಗಡೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಫೆ.14ರಂದು ಸಿಎಂ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಲಿದ್ದು, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಕೆ. ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದರು.

ಸಮಾಜದ ಮುಖಂಡರಾದ ಹನುಮಂತ ನಾಯ್ಕ, ನಂಜಾನಾಯ್ಕ, ಪ್ರಕಾಶ್ ನಾಯ್ಕ, ಪಾಲಿಕೆ ಸದಸ್ಯ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ರಾಜ್ಯಮಟ್ಟದ ವಿಚಾರ ಸಂಕಿರಣ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯಿಂದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಗುರುವಾರ ಸಂಜೆ 4.30ಕ್ಕೆ ಭಾಯಾಗಡ್​ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಕೆ.ಎಚ್. ಉತ್ತಮ್ ತಿಳಿಸಿದರು.

ವಿಚಾರ ಸಂಕಿರಣವನ್ನು ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ಉದ್ಘಾಟಿಸುವರು. ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಇತರರು ಪಾಲ್ಗೊಳ್ಳುವರು.

‘ಬಂಜಾರ ಸಮುದಾಯ ಪ್ರಧಾನ ದೈವಗಳು ಹಾಗೂ ಮಹಿಳಾ ದೈವಗಳ ಆರಾಧನೆ’ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಬಿ.ಟಿ. ಲಲಿತಾ ನಾಯಕ್ ವಹಿಸುವರು. ‘ಬಹುತ್ವ ಸಂಸ್ಕೃತಿಗಳ ಭಾರತದಲ್ಲಿ ಅಲೆಮಾರಿ ಬುಡಕಟ್ಟುಗಳ ಧಾರ್ವಿುಕ ಶ್ರದ್ಧೆ ಮತ್ತು ಲೋಕದೃಷ್ಟಿ’ ಕುರಿತು ಸಂಸ್ಕೃತಿ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ವಿಷಯ ಮಂಡಿಸುವರು. ‘ಧರ್ಮ, ವೈಚಾರಿಕತೆ ಮತ್ತು ವೈಜ್ಞಾನಿಕತೆ’ ಕುರಿತು ಸಹಾಯಕ ಪ್ರಾಧ್ಯಾಪಕ ಎಲ್. ಗಂಗಾನಾಯ್ಕ ಮಾತನಾಡುವರು ಎಂದು ಹೇಳಿದರು.

ಊಟ, ಉಪಾಹಾರ, 40 ಸಾವಿರ ಪ್ಯಾಕೆಟ್ ಮಜ್ಜಿಗೆಯನ್ನು ವ್ಯವಸ್ಥೆ ಮಾಡಲಾಗಿದೆ. 100 ರಿಂದ 150 ಶೌಚಗೃಹ ನಿರ್ವಿುಸಲಾಗಿದ್ದು ಮೊಬೈಲ್ ಶೌಚಗೃಹಗಳ ಏರ್ಪಾಟು ಮಾಡಲಾಗಿದೆ. ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಿಂದ ಬರುವ 250 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಲಿದ್ದಾರೆ. | ಎನ್. ಜಯದೇವ್ ನಾಯ್ಕ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net