ಮಾಳದಲ್ಲಿ ಜೀವವೈವಿಧ್ಯ ಅಧ್ಯಯನ ಕೇಂದ್ರ, ಪಾಳು ಬಿದ್ದ ಶಾಲೆ ಕಟ್ಟಡ ಸದುಪಯೋಗಕ್ಕೆ ಪರಿಸರಾಸಕ್ತರ ಆಸಕ್ತಿ

mala new
Published on

ಗೋಪಾಲಕೃಷ್ಣ ಪಾದೂರು ಉಡುಪಿ

ಕಾರ್ಕಳ ತಾಲೂಕಿನ ಮಾಳ ಎಡಪಾಡಿ ಕಿರಿಯ ಪ್ರಾಥಮಿಕ ಶಾಲೆ 15 ವರ್ಷಗಳ ಹಿಂದೆ ಮುಚ್ಚಲ್ಪಟ್ಟು ಶಿಥಿಲಗೊಳ್ಳುವ ಸ್ಥಿತಿಯಲ್ಲಿದೆ. ಇದನ್ನು ಸರ್ಕಾರ ಜೀವವೈವಿಧ್ಯ ಅಧ್ಯಯನ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.

1956ರಲ್ಲಿ ಪ್ರಾರಂಭವಾದ ಶಾಲೆಗೆ ದಿ.ವೆಂಕಟೇಶ್ ಭಟ್ ಎಂಬುವರು 5 ಸೆಂಟ್ಸ್ ಜಾಗ ದಾನಪತ್ರ ಮೂಲಕ ಹಸ್ತಾಂತರಿಸಿದ್ದು, ಪ್ರಸಕ್ತ ಶಿಕ್ಷಣ ಇಲಾಖೆ ಅಧೀನದಲ್ಲಿದೆ. ಮಾಳ ಪೇಟೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಶಾಲೆ ಉತ್ತಮ ಸಂಪರ್ಕ ರಸ್ತೆ ಹೊಂದಿದ್ದು, ಈ ಭಾಗಕ್ಕೆ ನಿತ್ಯ ಹತ್ತಾರು ಮಂದಿ ಜೀವವೈವಿಧ್ಯ ಅಧ್ಯಯನ, ಸಂಶೋಧನೆ, ಚಾರಣಕ್ಕೆ ಆಗಮಿಸುತ್ತಾರೆ. ಅವರಿಗೆ ಇಲ್ಲಿ ಮಾಹಿತಿ ಕೇಂದ್ರವಿಲ್ಲ. ಹೀಗಾಗಿ ಘಟ್ಟದ ತಪ್ಪಲಿನಲ್ಲಿರುವ ಈ ಜಾಗದಲ್ಲಿ ಬೇಸ್ ಕ್ಯಾಂಪ್ ಪ್ರಾರಂಭಿಸಬಹುದು ಎನ್ನುತ್ತಾರೆ ಸ್ಥಳೀಯರು.

ದಾಖಲೆಯಲ್ಲಿ ಮುಚ್ಚಿಲ್ಲ
ಸರ್ಕಾರ ಅಧಿಕೃತವಾಗಿ ಶಾಲೆಯ ಕಾರ್ಯಾಚರಣೆ ಸ್ಥಗಿತಗೊಳಿಸಿ, ಜಾಗವನ್ನು ಪಂಚಾಯಿತಿ ಅಥವಾ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ ಸರ್ಕಾರಿ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ ಮಾಡೆಲ್) ಉತ್ತಮ ಇಕೋ ಸ್ಟಡಿ ಸೆಂಟರ್ ತೆರೆಯಲು ಸಾಧ್ಯ ಎನ್ನುತ್ತಾರೆ ಶಾಲೆಯ ಹಳೇ ವಿದ್ಯಾರ್ಥಿ ಶಾಂತಾರಾಮ ಚಿಪ್ಲೂಣ್‌ಕರ್.

ಸುಮಾರು 6 ದಶಕಗಳ ಹಿಂದಿನ ಶಾಲೆ ಮಕ್ಕಳಿಲ್ಲದೆ ಮುಚ್ಚಲ್ಪಟ್ಟಿದೆ. ಕಟ್ಟಡ ಜೀರ್ಣಾವಸ್ಥೆಗೆ ತಲುಪಿದ್ದು, ಅನೇಕ ಕಡೆ ಗೋಡೆ ಕುಸಿದಿದೆ. ಪಶ್ಚಿಮ ಘಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ ಅನೇಕ ಮಂದಿ ಸಂಶೋಧಕರು, ಪರಿಸರಾಸಕ್ತರು ಜೀವವೈವಿಧ್ಯ ಅಧ್ಯಯನಕ್ಕೆ ಬರುತ್ತಾರೆ. ಅವರಿಗೆ ಮಾಹಿತಿ ನೀಡುವಂಥ ಸೌಲಭ್ಯಗಳು ಈ ಪ್ರದೇಶದಲ್ಲಿ ಇಲ್ಲ. ಹೀಗಾಗಿ ಸರ್ಕಾರ ಜೀವವೈವಿಧ್ಯ ಅಧ್ಯಯನ ಕೇಂದ್ರ ಸ್ಥಾಪಿಸಿದರೆ ಪ್ರವಾಸಕ್ಕೆ ಬರುವ ಶಾಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಸ್ಥಳೀಯ ಪರಿಸರಾಸ್ತಕರು ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿದ್ದಾರೆ.
ಪುರುಷೋತ್ತಮ ಅಡ್ವೆ
ಸ್ಥಳೀಯ ಪರಿಸರಾಸಕ್ತರು, ಮಾಳ

ಮಾಳ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಣ ಇಲಾಖೆ ಸುಪರ್ದಿಯಲ್ಲಿದ್ದು, ಮಕ್ಕಳಿಲ್ಲದ ಕಾರಣ ಅನೇಕ ವರ್ಷದಿಂದ ಮುಚ್ಚಲ್ಪಟ್ಟಿದೆ. ಜೀವವೈವಿಧ್ಯ ಅಧ್ಯಯನ ಕೇಂದ್ರ ಸ್ಥಾಪಿಸಲು ಸ್ಥಳೀಯ ಆಸಕ್ತರು ಮನವಿ ನೀಡಿದರೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಶಶಿಧರ್, ಬಿಇಒ, ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net