ಕುಣಿಗಲ್​ನ ಮಾಕೋರ್ನಹಳ್ಳಿ ಜಲಾಶಯ ಭರ್ತಿ

3
Published on

ಸ್ವಯಂಚಾಲಿತ ಸೈಫನ್​ಗಳ ಮೂಲಕ ಹೊರ ಹರಿಯುತ್ತಿರುವ ನೀರು

ವಿಜಯವಾಣಿ ಸುದ್ದಿಜಾಲ ಕುಣಿಗಲ್​
ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಿರುವ ತಾಲೂಕಿನ ಪ್ರಸಿದ್ಧ ಮಾಕೋರ್ನಹಳ್ಳಿ ಜಲಾಶಯ ಭರ್ತಿಯಾಗಿ, ಬುಧವಾರ ಸ್ವಯಂಚಾಲಿತ ಸೈಫನ್​ಗಳ ಮೂಲಕ ನೀರು ಹೊರ ಹರಿಯಿತು.


ಕಳೆದ ಮೂರ್ನಾಲ್ಕು ನಾಲ್ಕುದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಸುರಿದ ಮಳೆಗೆ ಕುಣಿಗಲ್​ ಹಾಗೂ ತುರುವೇಕೆರೆ ತಾಲೂಕು ವ್ಯಾಪ್ತಿಯ ಕೆರೆ&ಕಟ್ಟೆಗಳು ತುಂಬಿ ಕೋಡಿ ಬಿದ್ದು, ಜತೆಗೆ ಹೇಮಾವತಿ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಜಲಾಶಯ ಭರ್ತಿಯಾಗಿ, ಸ್ವಯಂ ಚಾಲಿತ ಎರಡು ಸೈನ್​ಗಳ ಮೂಲಕ ನೀರು ಹೊರ ಹರಿಯುತ್ತಿದೆ. ಸತತ ಮೂರು ವರ್ಷಗಳಿಂದ ಮಾಕೋರ್ನಹಳ್ಳಿ ಜಲಾಶಯವು ಭರ್ತಿಯಾಗಿ ಜನ ಜಾನುವಾರಗಳ ಕುಡಿಯುವ ನೀರು ಮತ್ತು ರೈತರ ಬೆಳೆಗೆ ಅನುಕೂಲವಾಗಿತ್ತು. ಈ ಬಾರಿಯೂ ಜಲಾಶಯ ಭರ್ತಿಯಾಗಿರುವುದು ಅಮೃತ್ತೂರು, ಎಡಿಯೂರು ಮತ್ತು ಹುಲಿಯೂರುದುರ್ಗ ಹೋಬಳಿಯ ಜನರಿಗೆ ವರದಾನವಾಗಿದೆ. ಇನ್ನು ಡ್ಯಾಂ ಭರ್ತಿಯಾಗುತ್ತಿದ್ದಂತೆ, ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾಂ ಗೆ ಭೇಟಿ ನೀಡುತ್ತಿದ್ದಾರೆ.

1,527 ಕ್ಯೂಸೆಕ್​ ಒಳ ಹರಿವು: ಮಾಕೋರ್ನಹಳ್ಳಿ ಜಲಾಶಯದ ಸಾಮರ್ಥ್ಯ 2.4 ಟಿಎಂಸಿ ಇದ್ದು, ಜಲಾಶಯದಲ್ಲಿಗ 2.3 ಟಿ.ಎಂಸಿ ನೀರು ಸಂಗ್ರಹಗೊಂಡಿದೆ. 1,527 ಕ್ಯೂಸೆಕ್​ ಒಳ ಹರಿವಿದ್ದು, ಮಳೆ ಹೀಗೇ ಸುರಿದರೆ ಜಲಾಶಯದ ಒಳ ಹರಿವು ಹೆಚ್ಚಾಗಲಿದೆ ಎಂದು ಎಡಿಯೂರು ಹೇಮಾವತಿ ಎಇಇ ರುದ್ರೇಶ್​ ತಿಳಿಸಿದ್ದಾರೆ.

ನದಿಪಾತ್ರದ ಜನರಿಗೆ ಎಚ್ಚರಿಕೆ: ಮಾಕೋರ್ನಹಳ್ಳಿ ಜಲಾಶಯವು ಭರ್ತಿಯಾಗಿದ್ದು, ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಲಾಶಯ ಪಾತ್ರದ ಗ್ರಾಮಗಳಿಗೆ ನೀರು ನುಗ್ಗುವ ಸಂಭವ ಇದೆ. ಹಾಗಾಗಿ ಮಾರ್ಕೊನಹಳ್ಳಿ, ಕಾಡು ಶೆಟ್ಟಿಹಳ್ಳಿ, ಬಿಸಿನೆಲೆ, ತೊರೆಹಳ್ಳಿ, ಶಾನಭೋಗನಹಳ್ಳಿ, ಕಿರಂಗೂರು, ಪಡುಗೆರೆ, ಬೆಟ್ಟಹಳ್ಳಿ, ದೊಡ್ಡಕಲ್ಲಹಳ್ಳಿ, ಒಳಗೆರೆಪುರ, ಚಂದನಹಳ್ಳಿ, ಅಂಚಿಪುರ, ಕೀಲಾರ, ಉಂಗುರ, ತೊರೆಬೊಮ್ಮನಹಳ್ಳಿ, ಕೊಡವತ್ತಿ, ಹನುಮಂತನಗರ ಸೇರಿ ಶಿಂಷಾ ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರು ಸುರತ ಸ್ಥಳದಲ್ಲಿ ಇರುವಂತೆ ಹಾಗೂ ಜಾನುವಾರುಗಳನ್ನು ತೊಳೆಯಲು ಮತ್ತು ನದಿಯಲ್ಲಿ ಈಜಾಡಲು ಯಾರೂ ಮುಂದಾಗಬಾರದೆಂದು ತಹಸೀಲ್ದಾರ್​ ಯು.ರಶ್ಮಿ ಮನವಿ ಮಾಡಿದ್ದಾರೆ.

ಎಲ್ಲೆಲ್ಲಿ ಎಷ್ಟು?
ಕಳೆದ 24 ಗಂಟೆಗಳಲ್ಲಿ ಕುಣಿಗಲ್​ 51 ಮಿ.ಮೀ, ಮಾಕೋರ್ನಹಳ್ಳಿ 35.1 ಮಿ.ಮೀ, ಕೆ.ಎಚ್​.ಹಳ್ಳಿ 29.2 ಮಿ.ಮೀ, ಸಂತೇಪೇಟೆ 17.4 ಮಿ.ಮೀ, ನಿಡಸಾಲೆ 17.4 ಮಿ.ಮೀ, ಹುಲಿಯೂರುದುರ್ಗ 40 ಮಿ.ಮೀ, ಅಮೃತ್ತೂರು 36.2 ಮಿ.ಮೀ, ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net