

ನಾಪೋಕ್ಲು: ಇಲ್ಲಿಗೆ ಸಮೀಪ ಬೇತು ಗ್ರಾಮದ ಮಕ್ಕಿ ಶಾಸ್ತಾವು ವಾರ್ಷಿಕ ಉತ್ಸವ ಶುಕ್ರವಾರ ಎರಡು ಪ್ರಮುಖ ಕೋಲಗಳೊಂದಿಗೆ ಸಂಪನ್ನಗೊಂಡಿತು.
ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ವಿವಿಧ ಕೋಲಗಳು ಶಾಸ್ತಾವು ದೇವರಿಗೆ ಸೇವೆ ಸಲ್ಲಿಸಿದವು. ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ಗಮನ ಸೆಳೆದವು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸಿದರು. ಭಕ್ತರಿಂದ ದೇವರಿಗೆ ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸಲಾಯಿತು. ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಮಧ್ಯಾಹ್ನ್ನ ಜರುಗಿದ ವಿಷ್ಣುಮೂರ್ತಿ ಕೋಲದ ಮೇಲೇರಿ ಪ್ರದರ್ಶನವನ್ನು ಭಕ್ತರು ತದೇಕಚಿತ್ತದಿಂದ ವೀಕ್ಷಿಸಿದರು.
ಉತ್ಸವದ ಅಂಗವಾಗಿ ಡಿ.15ರಂದು ಹರಕೆಯ ಮಣ್ಣಿನ ನಾಯಿಯನ್ನು ಭಕ್ತರು ಒಪ್ಪಿಸುವುದರೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಬುಧವಾರ ಕೊಟ್ಟಿ ಹಾಡುವುದು, ಗುರುವಾರ ರಾತ್ರಿ ದೀಪಾರಾಧನೆ (ಅಂದಿಬೊಳಕ್) ಕಾರ್ಯಕ್ರಮ ನಡೆಯಿತು. ಕೇರಳದ ಚಂಡೆ, ತಿರುವಾಳ ನೃತ್ಯ ಭಕ್ತರ ಗಮನ ಸೆಳೆಯಿತು. ಶುಕ್ರವಾರ ಸಂಜೆ ಬೆಳ್ಳಿಯ ಮುಖವಾಡ ಧರಿಸಿ ವಿಷ್ಣುಮೂರ್ತಿ ಕೋಲ ದೇವಾಲಯದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಬರುವುದರೊಂದಿಗೆ ಉತ್ಸವಕ್ಕೆ ತೆರೆ ಬಿತ್ತು.
ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಮತ್ತು ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.