

ಮಡಿಕೇರಿ: ಮಕ್ಕಂದೂರು ಗ್ರಾಮ ಪಂಚಾಯಿತಿ ಆಡಳಿತ ಎರಡನೇ ಅವಧಿಗೆ ಬಿಜೆಪಿ ಪಾಲಾಗಿದೆ.
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಎನ್.ರಮೇಶ್ ಮತ್ತು ಉಪಾಧ್ಯಕ್ಷರಾಗಿ ವಿಮಲ ರವಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಕನ್ನಿಕಂಡ ಶ್ಯಾಂ ಮತ್ತು ಬಿಜೆಪಿಯ ಬಿ.ಎನ್.ರಮೇಶ್ ನಾಮಪತ್ರ ಸಲ್ಲಿಸಿದ್ದರು. ರಮೇಶ್ ೪ ಮತಗಳಿಂದ ಗೆದ್ದು ಬೀಗಿದರೆ, ಕನ್ನಿಕಂಡ ಶ್ಯಾಂ ೩ ಮತ ಪಡೆದು ಸೋಲನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಿಮಲ ರವಿ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಸಹಾಯಕ ಉಪ ಕಾರ್ಯದರ್ಶಿ ಜೀವನ್ ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಮುಖಂಡ ನಾಪಂಡ ರವಿ ಕಾಳಪ್ಪ, ಪಂಚಾಯತ್ ಪಿಡಿಒ ದಿನೇಶ್, ಉಪಾಧ್ಯಕ್ಷರಾಗಿದ್ದ ಕವಿತಾ, ಸದಸ್ಯರಾದ ಗಣೇಶ್, ಸುನಂದಾ, ಬೀನಾ ಸೇರಿದಂತೆ ಮತ್ತಿತರರು ಇದ್ದರು.