

ಸರಗೂರು: ಮಕ್ಕಳ ವ್ಯಕ್ತಿತ್ವ ಹಾಗೂ ಜ್ಞಾನ ವಿಕಾಸಕ್ಕೆ ಚಿತ್ರಕಲೆ, ಸಂಗೀತ, ನೃತ್ಯ, ಸಾಹಿತ್ಯ, ನಟನೆ ಸಹಕಾರಿ ಎಂದು ಹಾದನೂರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಾಂತಮ್ಮ ಅಭಿಪ್ರಾಯಪಟ್ಟರು.
ತಾಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಸಂತೆ ಶನಿವಾರ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದರು. ಸಂತೆಯಲ್ಲಿ 35 ಅಂಗಡಿಗಳನ್ನು ತೆರೆಯಲಾಗಿತ್ತು, ಒಂದರಿಂದ ಏಳನೇ ತರಗತಿವರೆಗಿನ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲ ಪುಟಾಣಿಗಳೂ ತಮ್ಮ ಮನೆಯಲ್ಲಿ ಬೆಳೆಯುವ ಸೊಪ್ಪು-ತರಕಾರಿ, ಹಣ್ಣು-ಹಂಪಲು, ತೆಂಗಿನಕಾಯಿ ಹಾಗೂ ತಿಂಡಿ-ತಿನಿಸುಗಳನ್ನು ತಂದು ಮಾರಾಟ ಮಾಡಿದರು.
ಹಾದನೂರು ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಮಕ್ಕಳು ಅಂಗಡಿಯಲ್ಲಿ ನಗುಮೊಗದಿಂದ ಗ್ರಾಹಕರನ್ನು ಆಹ್ವಾನಿಸುತ್ತಿದ್ದುದು ಖುಷಿ ನೀಡಿತು. ತಮ್ಮ ಮಾತಿನ ಮೋಡಿಯಿಂದ ವ್ಯಾಪಾರ ಕುದುರಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಗ್ಗೆ ಹತ್ತು ಗಂಟೆಗೆ ಪ್ರಾರಂಭವಾದ ಸಂತೆಯಲ್ಲಿ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಮಾರಾಟಕ್ಕಿಟ್ಟ ಎಲ್ಲ ಸಾಮಗ್ರಿಗಳು ಬಿಕರಿಯಾದವು.
ಸಂತೆ ಮುಗಿಸಿದ ನಂತರ ಎಲ್ಲ ಮಕ್ಕಳು ಹೊಸ ಅನುಭವದ ಗೆಲುವಿನ ನಗು ಅರಳಿಸಿದರು. ಅಧಿಕ ವ್ಯಾಪಾರ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ, ಬಹುಮಾನ ನೀಡಲಾಯಿತು.
ಗ್ರಾಪಂ ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಮಕ್ಕಳು ಸಂತೆಯಲ್ಲಿ ವ್ಯಾಪಾರಕ್ಕೆ ಕೂರುವ ಮೊದಲು ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವ್ಯವಹಾರ ಜ್ಞಾನದ ಬಗ್ಗೆ ಮಾಹಿತಿ ಒದಗಿಸಿದ್ದರು. ಇದರಿಂದಾಗಿ ಮಕ್ಕಳು ಸಂತೆಯಲ್ಲಿ ಆತ್ಮವಿಶ್ವಾಸದಿಂದ ವ್ಯಾಪಾರ ನಡೆಸಲು ಸಾಧ್ಯವಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷೆ ಹೊಂಬಳಮ್ಮ, ಸದಸ್ಯರಾದ ಪಾಪಣ್ಣ, ಸ್ವಾಮಿ, ಶಿವು, ನಂಜುಂಡಿ, ಅಥಿತಿ ಶಿಕ್ಷಕರಾದ ಪ್ರಸನ್ನಕುಮಾರ್, ಕೃಷ್ಣಮೂರ್ತಿ, ಸಿದ್ದರಾಜು, ಹೇಮಾವತಿ ಮತ್ತಿತರರು ಹಾಜರಿದ್ದರು.
ಪೋಟೋ ಕ್ಯಾಪ್ಶನ್..
09 ಎಸ್ ಆರ್ ಜಿ 1.2
ಸರಗೂರು ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಸಂತೆಯಲ್ಲಿ ವ್ಯಾಪಾರದಲ್ಲಿ ತೊಡಗಿರುವ ಮಕ್ಕಳು.