

ಮೈಸೂರು: ಸದಾ ಅಮ್ಮನ ಸೆರಗು ಹಿಡಿದು ತಿಂಡಿ ತಿನಿಸುಗಳಿಗಾಗಿ ಮಕ್ಕಳು ರಚ್ಚೆ ಹಿಡಿಯುವುದು ಸಾಮಾನ್ಯ. ಆದರೆ, ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳು ತಿಂಡಿ ತಿನಿಸುಗೋಸ್ಕರ ರಚ್ಚೆ ಹಿಡಿಯಲಿಲ್ಲ. ಬದಲಾಗಿ ತಾವೇ ತಿಂಡಿ ತಿನಿಸು ಮಾರಾಟದಲ್ಲಿ ಮಗ್ನರಾಗಿದ್ದರು.
ಬೆಳಗ್ಗಿನಿಂದ ಸಂಜೆವರೆಗೆ ನಡೆದ ಮಕ್ಕಳ ಸಂತೆಯಲ್ಲಿ 5 ರಿಂದ 10ನೇ ತರಗತಿ ಮಕ್ಕಳು ಭರ್ಜರಿ ವ್ಯಾಪಾರ ವಹಿವಾಟು ನಡೆಸಿದರು. ಕೆಲವು ವಿದ್ಯಾರ್ಥಿಗಳು ಏಕಾಂಗಿಯಾಗಿ ವ್ಯಾಪಾರ ವಹಿವಾಟು ನಡೆಸಿದರೆ ಇನ್ನು ಕೆಲವು ವಿದ್ಯಾರ್ಥಿಗಳು ತಂಡವನ್ನು ರಚಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ದೃಶ್ಯಗಳು ಕಂಡು ಬಂತು.
ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರೇ ಇವರ ಗ್ರಾಹಕರು. ಮಕ್ಕಳ ಸಂತೆಯಲ್ಲಿ ಶಾಲೆಯ ಎಲ್ಲ ಮಕ್ಕಳು ವ್ಯಾಪಾರ ವಹಿವಾಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳು ಮಾತ್ರ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದರು. ಉಳಿದ ವಿದ್ಯಾರ್ಥಿಗಳು ತಿಂಡಿ ತಿನಿಸುಗಳನ್ನು ಖರೀದಿಸುವ ಮೂಲಕ ಸಹಪಾಠಿಗಳಿಗೆ ಪ್ರೋತ್ಸಾಹ ನೀಡಿದರು.
ಮಕ್ಕಳ ಸಂತೆಗೆ ಶ್ರೀ ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ. ಪಾಪೇಗೌಡ ಚಾಲನೆ ನೀಡಿದರು. ವಿದ್ಯಾಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಜಿ. ಚಂದ್ರಶೇಖರ್, ಪ್ರೌಢ ಶಾಲಾ ಮುಖ್ಯಶಿಕ್ಷಕ ಜಿ.ಎನ್. ವಿಶ್ವನಾಥ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವೀಣಾ ಕೆ. ಹೆಗಡೆ ಹಾಗೂ ಇತರರು ಇದ್ದರು.