

ಮಂಡ್ಯ: ಪ್ರತಿ ತಿಂಗಳು ನಮ್ಮ ದೇಶದಲ್ಲಿ ಪೋಕ್ಸೋ ಕಾಯ್ದೆಯಡಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ಹೇಳಿದರು.
ನಗರದ ಗುತ್ತಲು ಬಡಾವಣೆಯ ಕುವೆಂಪು ಶತಮಾನೋತ್ಸವ ಶಾಲಾ ಆವರಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098, ಕುವೆಂಪು ಶತಮಾನೋತ್ಸವ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಜಾಗೃತಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೋಕ್ಸೋ, ಮಕ್ಕಳ ಮೇಲಿನ ಶೋಷಣೆ ಹಾಗೂ ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳು ಸಮಾಜದೊಳಗೆ ತಾಂಡವವಾಡುತ್ತಿವೆ. ಇದಕ್ಕೆ ಕಾನೂನಿನ ಅರಿವಿನ ಕೊರತೆಯೇ ಕಾರಣ. ಹೆಣ್ಣು ಮಕ್ಕಳು 10ನೇ ತರಗತಿ ಮುಗಿಸುತ್ತಿದ್ದಂತೆ ಮನೆಯಲ್ಲಿ ಮದುವೆಗೆ ಸಿದ್ಧತೆ ನಡೆಸುತ್ತಿರುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಜಾಗೃತಿ ಮೂಡಿಸಬೇಕಾಗಿದೆ. ಆಗ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಮಳವಳ್ಳಿ ಮತ್ತು ಚಿತ್ರದುರ್ಗ, ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವಾರು ಕಡೆಗಳಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸಗಳಾಗಿವೆ. ಇಡೀ ಸಮುದಾಯ ಒಟ್ಟಾದರೆ ಮಾತ್ರ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯ. ಇದರೊಟ್ಟಿಗೆ ಮಕ್ಕಳು ಧೈರ್ಯವಂತರಾಗಬೇಕು. ಎಂತಹ ಸಂದರ್ಭದಲ್ಲಾದರೂ ತಮ್ಮನ್ನು ತಾವು ಸ್ವಯಂ ರಕ್ಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ತಾಯಂದಿರ ಗರ್ಭದಲ್ಲಿರುವಾಗಲೇ ಹೆಣ್ಣು ಮಕ್ಕಳಿಗೆ ಶೋಷಣೆ ಪ್ರಾರಂಭವಾಗುತ್ತದೆ. ಹೆಣ್ಣು ಎಂದು ತಿಳಿದ ತಕ್ಷಣವೇ ನಾಲ್ಕೈದು ತಿಂಗಳಲ್ಲಿ ಗರ್ಭಪಾತ ಮಾಡಿಸುವುದು, ಸಾಧ್ಯವಾಗದಿದ್ದರೆ ಹುಟ್ಟಿದ ಮೇಲೆ ಶೋಷಣೆಗೆ ಒಳಪಡಿಸುವಂತಹ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ನಮ್ಮಲ್ಲಿ ಪ್ರತಿ ವರ್ಷ 10,600ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜು, ಡಿಡಿಪಿಐ ಜವರೇಗೌಡ, ಡಿವೈಎಸ್ಪಿ ಶಿವಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರಸ್ವಾಮಿ, ಕುವೆಂಪು ಶಾಲೆ ಪ್ರಾಂಶುಪಾಲ ಹನುಮಂತಯ್ಯ, ಮುಖ್ಯಶಿಕ್ಷಕ ಎಂ.ಜೆ.ಲೋಕೇಶ್, ಬರ್ಡ್ಸ್ ಸಂಸ್ಥೆ ನಿರ್ದೇಶಕ ಮಿಕ್ಕೆರೆ ವೆಂಕಟೇಶ್, ಶೋಭಾವತಿ ಇತರರಿದ್ದರು.