

ಮದ್ದೂರು: ಅಕ್ಕಪಕ್ಕದ ಹಳ್ಳಿಗಳ ಅಂಗಡಿಗಳಲ್ಲೇ ಮದ್ಯ ಮಾರಾಟ ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದು, ಕುಡುಕರು ರಾತ್ರಿ ವೇಳೆ ಕುಡಿದು ಬಾಟಲಿಗಳನ್ನು ಶಾಲೆಯೊಳಗೆ ಎಸೆಯುತ್ತಾರೆ.... ಕುಡಿದ ಮತ್ತಿನಲ್ಲಿ ಜಗಳವಾಡುವುದರಿಂದ ಹಾಸ್ಟೆಲ್‌ನಲ್ಲಿ ಓದಿಕೊಳ್ಳಲು ಕಷ್ಟವಾಗುತ್ತಿದೆ....ನಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ.... ರಸ್ತೆ ಸರಿಯಿಲ್ಲದೆ ಶಾಲೆಗೆ ಬರಲು ಸಮಸ್ಯೆಯಾಗುತ್ತಿದೆ....!
ಇದು ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹೂತಗೆರೆ ಗ್ರಾಮ ಪಂಚಾಯಿತಿ ಹಾಗೂ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯಿಂದ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಕೇಳಿಬಂದ ಸಮಸ್ಯೆಗಳು.
ಕೆಲವರು ಶಾಲೆ ಸಮೀಪ ಕುಡಿದು ಬಾಟಲ್ ಬೀಸಾಡಿ ಹೋಗುತ್ತಾರೆ. ಮಳೆ ನೀರಿಗೆ ಸೇತುವೆ ಕೊಚ್ಚಿಕೊಂಡು ಹೋಗಿ ರಸ್ತೆ ಹಾಳಾಗಿದೆ. ಇದರಿಂದಾಗಿ ನಾವು ಶಾಲೆಗೆ ಆರು ಕಿಮೀ ಸುತ್ತಿಕೊಂಡು ಬರುವಂತಾಗಿದೆ. ಸೈಕಲ್ ವ್ಯವಸ್ಥೆಯೂ ಇಲ್ಲದಿರುವುದರಿಂದ ತಾತ್ಕಾಲಿಕವಾಗಿ ವಾಹನ ವ್ಯವಸ್ಥೆ ಮಾಡಿಸಿಕೊಡುವಂತೆ ಮಕ್ಕಳು ಮನವಿ ಮಾಡಿದರು.
ನಮ್ಮ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮಹಿಳಾ ಶಿಕ್ಷಕರ ಅವಶ್ಯಕತೆ ಇದೆ. ಕೊಠಡಿಗಳು ಸೋರುತ್ತಿದ್ದು, ಕೂಡಲೇ ದುರಸ್ತಿಪಡಿಸಬೇಕು. ಸುಸಜ್ಜಿತ ಶೌಚಗೃಹಗಳನ್ನು ನಿರ್ಮಿಸಿಕೊಡಬೇಕು. ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಕಾರಣ ತಿಂಗಳಿಗೊಮ್ಮೆ ವೈದ್ಯರು ಬಂದು ತಪಾಸಣೆ ಮಾಡಬೇಕು ಎಂದು ಮಕ್ಕಳು ಕೋರಿದರು.
ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಚಯ್ಯ ಹಾಗೂ ಸದಸ್ಯರು, ಅಧಿಕಾರಿಗಳು, ತಾತ್ಕಾಲಿಕವಾಗಿ ವಾಹನ ವ್ಯವಸ್ಥೆ ಮಾಡಿಕೊಡಲು ಹಣ ಕೊಡುವುದಾಗಿ ತಿಳಿಸಿದರು. ಬೇರೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳುವುದಾಗಿ ಭರವಸೆ ನೀಡಿದರು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು, ಮಕ್ಕಳ ಸಹಾಯವಾಣಿ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಪಂ ಸದಸ್ಯರಾದ ಶ್ವೇತಾ ಜನಾರ್ಧನ, ಬೆಟ್ಟಸ್ವಾಮಿ, ರಾಮಚಂದ್ರ, ತಿಮ್ಮಮ್ಮ, ಕಾರ್ಯದರ್ಶಿ ದೇವಕುಮಾರ್, ವಿಮೋಚನಾ ಮಹಿಳಾ ಸಂಘಟನೆಯ ಜನಾರ್ಧನ ಹೂತಗೆರೆ, ಇಂಪನಾ, ಲಕ್ಷ್ಮೀಶ್, ಮೂಡಲಿಗೌಡ, ಭಾಗ್ಯ, ಸುನೀತಾ ಇತರರಿದ್ದರು.