

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ನಗರದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ದಸರಾದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಂಭ್ರಮಿಸಿದರು.
ನಾಗಪುರ ಹಾಡಿಯ ಆಶ್ರಮ ಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ವಿಜಯವಿಠ್ಠಲ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ, ಮೂಗೂರು ಕೆಪಿಎಸ್ ಶಾಲೆ ತಂಡದಿಂದ ಜಾನಪದ ನೃತ್ಯ ಹಾಗೂ ಸಾಯಿರಂಗ ಶಾಲೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.
ಈ ಸಂದರ್ಭ ಬಾಲಪ್ರತಿಭೆಗಳಾದ ಆರ್. ರಕ್ಷಿತಾ, ಚಿರಸ್ವಿ ಬಾಲಸುಬ್ರಹ್ಮಣ್ಯನ್, ಅರ್ಪಿತ್ ಕಲಾಗುಡಿ ಹಾಗೂ ಪ್ರಥಮ್ ಗೌಡ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಚಿವ ಮಧು ಬಂಗಾರಪ್ಪ, ಎಂಎಲ್‌ಸಿ ಮಂಜೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಉಪ ವಿಶೇಷಾಧಿಕಾರಿ ಬಿ.ಎಂ. ಸವಿತಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಹಾಗೂ ಇತರರು ಇದ್ದರು.