ಮಣ್ಣಿನಲ್ಲಿ ಗಣೇಶ ಮೂರ್ತಿ ಮಾಡಿಸಿ ಮಕ್ಕಳಲ್ಲಿ ಪರಿಸರ ಜಾಗೃತಿ

6C
Published on

ಮೈಸೂರು: ಮಾಧವಕೃಪಾ ಗಣೇಶೋತ್ಸವ ಸಮಿತಿಯಿಂದ ಮಣ್ಣಿನಲ್ಲಿ ಗಣೇಶ ಮೂರ್ತಿ ಮಾಡಿಸುವ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು.

ಬಣ್ಣ, ಪಿಒಪಿಯಿಂದ ತಯಾರಿಸಿದ ಮೂರ್ತಿಗಳಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ವಿದ್ಯಾರ್ಥಿ ಜೀವನದಿಂದಲೇ ತಿಳಿಸಿಕೊಡುವ ಉದ್ದೇಶದಿಂದ ನಗರದ ಲಕ್ಷ್ಮೀಪುರಂನಲ್ಲಿರುವ ಮಾಧವ ಕೃಪಾದಲ್ಲಿ ಭಾನುವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ತಯಾರಿಸುವ ಕಾರ್ಯಾಗಾರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

38ನೇ ವರ್ಷದ ಮಾಧವಕೃಪಾ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಜೇಡಿ ಮಣ್ಣಿಗೆ ತುಳಸಿ ಸೇರಿದಂತೆ ವಿವಿಧ ಬೀಜಗಳನ್ನು ಹಾಕಿ ಹದಮಾಡಲಾಗಿತ್ತು. ಆ ಮಣ್ಣನ್ನು ಭರತ್ ಮತ್ತು ತಂಡ ಹೇಗೆ ಗಣೇಶಮೂರ್ತಿ ಮಾಡಬಹುದು ಎನ್ನುವ ಕುರಿತು ತರಬೇತಿ ನೀಡಿತು.

ಯಾವುದೇ ಬಣ್ಣವಿಲ್ಲದೆ ನೈಸರ್ಗಿಕವಾಗಿ ತಯಾರಿಸಿದ ಸುಮಾರು ಒಂದು ಅಡಿಯಷ್ಟು ಎತ್ತರದ ಮೂರ್ತಿ ಪೂಜಿಸಿದ ಬಳಿಕ ಅದನ್ನು ಒಂದು ಬಜೆಟ್ ಅಥವಾ ಟಬ್‌ನಲ್ಲಿ ಕರಗಿಸಿ ಆ ಮಣ್ಣನ್ನು ಮನೆಯ ಅಂಗಳದಲ್ಲಿಯೇ ಹಾಕಬೇಕು. ಆ ಮಣ್ಣಿನಲ್ಲಿ ಇರುವ ಬೀಜಗಳು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ. ಇದರಿಂದ ಪರಿಸರಕ್ಕೆ ಅನುಕೂಲವಾಗುತ್ತದೆ ಎಂದು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ ಸಮಿತಿ ಸಂಚಾಲಕ ಸಿ.ಕೆ.ರುದ್ರಮೂರ್ತಿ ವಿವರಿಸಿದರು.

ವೈದ್ಯ ಡಾ.ಸುರೇಶ್ ಮಾತನಾಡಿ, ನಮ್ಮ ಪುರಾಣದಲ್ಲಿಯೂ ಗಣೇಶನನ್ನು ಅಗ್ರ ದೇವತೆಯಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಆತನ ದೇಹಗಳ ಅಂಗಾಂಗಗಳು ನಮಗೆ ಒಂದೊಂದು ಸಂದೇಶವನ್ನು ನೀಡುತ್ತದೆ. ಅದನ್ನು ತಿಳಿದುಕೊಳ್ಳಲು ಇಂತಹ ಕಾರ್ಯಾಗಾರಗಳು ಅನುಕೂಲ. ಇದು ನಮ್ಮ ಧರ್ಮ, ಧಾರ್ಮಿಕತೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟಂತೆ ಆಗುತ್ತದೆ ಎಂದರು.

ತುಳಸಿ ಜುವೆಲರ್ಸ್‌ನ ತಿಲಕ್, ಮೈಸೂರು ಫಿಲಂ ಸೊಸೈಟಿ ಅಧ್ಯಕ್ಷ ಜೀವನ್, ಮಾಧವ ಕೃಪಾ ಗಣೇಶ ಉತ್ಸವದ ಸಂಯೋಜಕ ಚರಣ್ ಶಿವರಾಜ್, ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆ ಸಂಯೋಜಕ ಎನ್.ಆರ್.ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net