

ಹುಬ್ಬಳ್ಳಿ: ಪೊಲೀಸ್ ಇಲಾಖೆ ಮತ್ತು ಎನ್‌ಎಸ್‌ಎಸ್ ಸಹಯೋಗದಲ್ಲಿ ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜ್‌ನಲಿ ಬುಧವಾರ ಮಾದಕ ವಸ್ತುಗಳ ಸೇವನೆ ವಿರೋಧ ದಿನ ಮತ್ತು ಸಂಚಾರ ಕುರಿತು ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ ಮಾತನಾಡಿ, ಸಂಚಾರ ನಿಯಮ ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸಬಹುದು. ಆದರೆ, ಪ್ರಾಣ ಹೋದರೆ ಉಳಿಸಲು ಆಗುವುದಿಲ್ಲ. ಹಾಗಾಗಿ ತಪ್ಪದೇ ಸಂಚಾರ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕು. ಮಾದಕ ದ್ರವ್ಯಗಳ ಸೇವನೆಯಿಂದ ದೂರ ಇರಬೇಕು. ಇಲ್ಲವಾದರೆ ನಿಮ್ಮ ಬದುಕು ಹಾಳಾಗಿ ಹೋಗಲಿದೆ. ಅಪ್ಪ-ಅಮ್ಮ ನಿಮ್ಮ ಮೇಲಿಟ್ಟಿರುವ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಚಾರ ವಿಭಾಗದ ಎಸಿಪಿ ವಿನೋದ ಮುಕ್ತೇದಾರ, ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಅವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ಹಾನಿ ಕುರಿತು ಮಾತನಾಡಿದರು. ಉತ್ತರ ಸಂಚಾರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಗೋಕಾಕ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪೂರ್ವ ಸಂಚಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ, ಪದವಿಪೂರ್ವ ಪ್ರಾಚಾರ್ಯ ಡಾ.ಡಿ.ಕೆ. ವಾಘ್ಮೋಡೆ ಇತರರು ಇದ್ದರು.
ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಂತ ಗೌಳಿ ವಂದಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ನೇತ್ರಾವತಿ ಗಬ್ಬೂರ ನಿರೂಪಿಸಿದರು.